ಬಾಂಗ್ಲಾ ಸಿನಿಮಾಕ್ಕೆ ಶಕ್ತಿ ಇದೆ: ದಕ್ಷಿಣ ಭಾರತದ ಸಿನಿಮಾಗಳ ಉದಾಹರಿಸಿದ ಸಚಿವ ಅನುರಾಗ್ ಠಾಕೂರ್

| Updated By: ವಿವೇಕ ಬಿರಾದಾರ

Updated on: Jun 17, 2023 | 11:00 PM

Tv9 Award: ಟಿವಿ9 ಬಾಂಗ್ಲಾ ಆಯೋಜಿಸಿದ್ದ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅತಿಥಿಯಾಗಿ ಭಾಗವಹಿಸಿದ್ದರು.

ಬಾಂಗ್ಲಾ ಸಿನಿಮಾಕ್ಕೆ ಶಕ್ತಿ ಇದೆ: ದಕ್ಷಿಣ ಭಾರತದ ಸಿನಿಮಾಗಳ ಉದಾಹರಿಸಿದ ಸಚಿವ ಅನುರಾಗ್ ಠಾಕೂರ್
ಅನುರಾಗ್ ಠಾಕೂರ್
Follow us on

‘ಟಿವಿ9 ಬಾಂಗ್ಲಾ ಗೋರೇರ್ ಬಯೋಸ್ಕೋಪ್ 2023’ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್ (Anurag Thakur), ”ಭಾರತದ ಮನೊರಂಜನಾ ಕ್ಷೇತ್ರ ಕಳೆದ ಕೆಲವು ವರ್ಷಗಳಲ್ಲಿ ಸಾಧಿಸಿರುವ ಪ್ರಗತಿ ಅಭೂತಪೂರ್ವವಾದುದು. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಸಿನಿಮಾ, ಡಾಕ್ಯುಮೆಂಟರಿಗಳಿಗೆ ಪ್ರಶಸ್ತಿಗಳು ದೊರೆಯುತ್ತಿವೆ ಇದು ಹೆಮ್ಮೆಯ ವಿಷಯ” ಎಂದರು.

”ದಕ್ಷಿಣ ಭಾರತದ ಸಿನಿಮಾಗಳನ್ನು ಇಡೀ ಭಾರತ ಮೆಚ್ಚಿ ನೋಡುತ್ತಿದೆ. ಕೊರಿಯನ್ ಭಾಷೆಯ ಕಂಟೆಂಟ್​ಗೆ ವಿಶ್ವದೆಲ್ಲೆಡೆ ಬೇಡಿಕೆ ಇದೆ. ಹೀಗಿರುವಾಗ ಬಾಂಗ್ಲಾದ ಕಂಟೆಂಟ್ ಸಹ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಬಹುದಾಗಿದೆ. ಆ ಶಕ್ತಿ, ಗುಣಮಟ್ಟ ಬಾಂಗ್ಲಾದ ಮನೊರಂಜನಾ ಕಂಟೆಂಟ್​ಗೆ ಇದೆ. ಪಶ್ಚಿಮ ಬಂಗಾಳದ ಮಣ್ಣಿನಲ್ಲಿ ಅತ್ಯುತ್ತಮ ಸಾಹಿತಿಗಳು, ಸಿನಿಮಾ ನಿರ್ದೇಶಕರು ಚಿಂತಕರು ಜನಿಸಿದ್ದಾರೆ” ಎಂದು ಅನುರಾಗ್ ಠಾಕೂರ್ ಅಭಿಪ್ರಾಯ ವ್ಯಕ್ತಪಡಿಸಿದರು.

”ಈಗಿನ ನಿರ್ಮಾಪಕರು, ನಿರ್ದೇಶಕರು ಹೆಚ್ಚು ಜಾಗೃತೆಯಿಂದ ಇರಬೇಕಾಗಿದೆ. ಬೇರೆ ಕೆಲ ಮಾಧ್ಯಮಗಳಿಗೆ ಇರುವ ಸೆನ್ಸಾರ್​ಶಿಪ್​ ಒಟಿಟಿಗೆ ಇಲ್ಲ. ನಿರ್ದೇಶಕರು, ನಿರ್ಮಾಪಕರು ಸ್ವಯಂ ನಿಯಂತ್ರಣ ಹೇರಿಕೊಂಡು, ಸಮಾಜದ ಸ್ವಾಸ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಕಂಟೆಂಟ್ ನೀಡಬೇಕಾಗಿದೆ. ಡಿಜಿಟಲ್ ಮಾಧ್ಯಮಗಳ ಮೂಲಕ ಯಾವುದೇ ಕಂಟೆಂಟ್ ಆಗಲಿ ನೇರವಾಗಿ ವ್ಯಕ್ತಿಗೆ ತಲುಪುತ್ತಿದೆ, ಬಳಕೆದಾರನ ಮೇಲೆ ಪ್ರಭಾವ ಬೀರುತ್ತಿದೆ. ಹಾಗಾಗಿ ಹೆಚ್ಚಿನ ಎಚ್ಚರಿಕೆಯ ಅವಶ್ಯಕತೆ ಇದೆ” ಎಂದರು.

ಟಿವಿ9 ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ ಅನುರಾಗ್ ಠಾಕೂರ್, ಟಿವಿ9 ಬಾಂಗ್ಲಾ ಆಯೋಜಿಸಿರುವ ಈ ಕಾರ್ಯಕ್ರಮ ತನ್ನ ಮೊದಲ ಆವೃತ್ತಿಯಲ್ಲಿಯೇ ಯಶಸ್ವಿಯಾಗಿದೆ. ದೊಡ್ಡ ಸಂಖ್ಯೆಯ ಪ್ರೇಕ್ಷಕರು, ಕಲಾವಿದರು ಇಂದು ಸೇರಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ಆಡಿಟೋರಿಯಂನಲ್ಲಿ ಆಯೋಜಿಸುವ ಬದಲಿಗೆ ದೊಡ್ಡ ಮೈದಾನದಲ್ಲಿ ಆಯೋಜಿಸಬೇಕಾಗಿ ಬರಬಹುದು ಎಂದು ಕಾರ್ಯಕ್ರಮದ ಯಶಸ್ಸಿಗೆ ಎಂಡಿ ಬರುನ್ ದಾಸ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಟಿವಿ9 ಬಾಂಗ್ಲಾ ಮೊದಲ ಬಾರಿಗೆ ಟಿವಿ9 ಬಾಂಗ್ಲಾ ಗೋರ್ ಬಯೋಸ್ಕೋಪ್ ಪ್ರಶಸ್ತಿ 2023ನ್ನು ಇಂದು (ಜೂನ್ 17) ಆಯೋಜಿಸಿತ್ತು. ಕಾರ್ಯಕ್ರಮವು ಕೊಲ್ಕತ್ತದ ಐಶಾರಾಮಿ ಹೋಟೆಲ್​ನ ಸಭಾಂಗಣದಲ್ಲಿ ಆಯೋಜಿತವಾಗಿತ್ತು. ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತ್ರವಲ್ಲದೆ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ್ ಬೋಸ್, ರಾಜ್ಯ ಸಚಿವ ಫಿರ್ಹಾದ್ ಹಕೀಮ್, ಕೊಲ್ಕತ್ತದ ಮೇಯರ್ ಇನ್ನು ಕೆಲವರು ಗಣ್ಯರು ಭಾಗವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:48 pm, Sat, 17 June 23