ಮೈಚಾಂಗ್ ಚಂಡಮಾರುತದಿಂದ ತಮಿಳುನಾಡು ಮತ್ತು ಸುತ್ತಮುತ್ತಲಿನ ಪ್ರದೇಶಗಳು ತೊಂದರೆಗೆ ಒಳಗಾಗಿವೆ. ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ಪ್ರವಾಹ ಉಂಟಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಚಂಡಮಾರುತಕ್ಕೆ ಚೆನ್ನೈನ ಹಲವು ಪ್ರದೇಶಗಳು ತತ್ತರಿಸಿವೆ. ಚೆನ್ನೈ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಈ ಚಂಡಮಾರುತದಿಂದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮನೆಗೂ ಹಾನಿಯಾಗಿದೆ. ಚೆನ್ನೈನ ಪೋಯಸ್ ಗಾರ್ಡನ್ ಪ್ರದೇಶದಲ್ಲಿ ರಜನಿಕಾಂತ್ (Rajinikanth) ಅವರ ಮನೆಗೆ ನೀರು ನುಗ್ಗಿದೆ ಎನ್ನಲಾಗಿದೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ರಜನಿಕಾಂತ್ ಮನೆ ಬಳಿ ನೀರು ನಿಂತಿರುವುದು ಕಂಡು ಬಂದಿದೆ. ಮನೆ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಚಂಡಮಾರುತದ ಸಮಯದಲ್ಲಿ ರಜನಿಕಾಂತ್ ಮತ್ತು ಅವರ ಕುಟುಂಬ ಚೆನ್ನೈನಲ್ಲಿ ಇರಲಿಲ್ಲ. ಅಭಿಮಾನಿಯೊಬ್ಬರು ಈ ವಿಡಿಯೋನ ಶೂಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ವರದಿಗಳ ಪ್ರಕಾರ, ‘ತಲೈವರ್ 170′ ಚಿತ್ರದ ಶೂಟಿಂಗ್ ಕೆಲಸಗಳ ಕಾರಣದಿಂದ ಅವರು ಮನೆಯಲ್ಲಿ ಇರಲಿಲ್ಲ.
ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಕೂಡ ಚೆನ್ನೈ ಪ್ರವಾಹದಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಫೋಟೋದಲ್ಲಿ ಅಮೀರ್ ಖಾನ್ ನೋಡಿ ಎಲ್ಲರೂ ಶಾಕ್ ಆಗಿದ್ದರು. ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಕೂಡ ಪ್ರವಾಹದಿಂದ ತೊಂದರೆಗೆ ಸಿಲುಕಿದ್ದಾರೆ.
ಮೈಚಾಂಗ್ ಚಂಡಮಾರುತ ಚೆನ್ನೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಸಾಕಷ್ಟು ತೊಂದರೆ ತಂದಿದೆ. ಚಂಡಮಾರುತ ಸ್ಥಳೀಯ ನಿವಾಸಿಗಳು ಜಲಾವೃತ ಮತ್ತು ವಿದ್ಯುತ್ ಪೂರೈಕೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಚಂಡಮಾರುತದ ವೇಳೆ ಸುರಿದ ಭಾರಿ ಮಳೆಗೆ ವೆಲಚೇರಿ, ತಾಂಬರಂ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ರಜನಿಕಾಂತ್ ಮನೆಗೆ ಯಾವುದೇ ಹಾನಿ ಆಗದಿರಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.
Poes Garden near @rajinikanth house @Savukkumedia @SavukkuOfficial #ChennaiFloods2023 #ChennaiRains2023 #chennaicyclone #சென்னையை_மீட்ட_திமுக pic.twitter.com/tHiYTrFsW2
— Abdul Muthaleef (@MuthaleefAbdul) December 6, 2023
ರಜನಿಕಾಂತ್ ಅವರು ಈ ವರ್ಷ ‘ಜೈಲರ್’ ಸಿನಿಮಾದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರ 650 ಕೋಟಿ ರೂಪಾಯಿ ಗಳಿಕೆ ಮಾಡಿ ಗೆದ್ದಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗ ಅವರ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ‘ಈ ಸಲ ಕಪ್ ನಮ್ದೇ’ ಎಂದ ರಜನಿಕಾಂತ್; ವರ್ಲ್ಡ್ ಕಪ್ ಫೈನಲ್ ಬಗ್ಗೆ ತಲೈವಾ ಭವಿಷ್ಯವಾಣಿ
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್ ‘ತಲೈವರ್ 170’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲು ರೆಡಿ ಆಗಿದ್ದಾರೆ. ಆ ಬಗ್ಗೆ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್’ ಕಡೆಯಿಂದ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ರಜನಿಕಾಂತ್ ನಟನೆಯ 170ನೇ ಸಿನಿಮಾ ಇದಾಗಿದ್ದು, ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಈ ಚಿತ್ರಕ್ಕೆ ಸದ್ಯ ‘ತಲೈವರ್ 170’ ಎಂದು ಶೀರ್ಷಿಕೆ ಇಡಲಾಗಿದೆ. ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್ ಅವರು ‘ಹಮ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. 1991ರಲ್ಲಿ ಈ ಚಿತ್ರ ತೆರೆಕಂಡಿತ್ತು. ಇದಾಗಿ 32 ವರ್ಷಗಳು ಕಳೆದ ಬಳಿಕ ಇಬ್ಬರೂ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ‘ಜೈ ಭೀಮ್’ ಖ್ಯಾತಿಯ ಟಿ.ಜೆ. ಜ್ಞಾನವೇಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ