ಪ್ರಭಾಸ್ ಸಿನಿಮಾ ಕೈಬಿಟ್ಟು, ಅಲ್ಲು ಅರ್ಜುನ್ ಸಿನಿಮಾ ಸೇರಿಕೊಂಡ ದೀಪಿಕಾ

Deepika Padukone: ತಾಯ್ತನದ ಬಳಿಕ ನಟಿ ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡುತ್ತಿದ್ದಾರೆ. ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾನಲ್ಲಿ ದೀಪಿಕಾ ನಟಿಸಲಿದ್ದಾರೆ ಎನ್ನಲಾಗಿತ್ತು, ಆದರೆ ‘ಸ್ಪಿರಿಟ್’ ಸಿನಿಮಾದಿಂದ ಹೊರಬಂದಿದ್ದು ಈಗ ಅಲ್ಲು ಅರ್ಜುನ್ ಅವರ ಹೊಸ ಸಿನಿಮಾ ಸೇರಿಕೊಂಡಿದ್ದಾರೆ. ಈ ಸಿನಿಮಾನಲ್ಲಿ ದೀಪಿಕಾ ಜೊತೆಗೆ ಇನ್ನೂ ಮೂವರು ನಟಿಯರು ಇರಲಿದ್ದಾರೆ.

ಪ್ರಭಾಸ್ ಸಿನಿಮಾ ಕೈಬಿಟ್ಟು, ಅಲ್ಲು ಅರ್ಜುನ್ ಸಿನಿಮಾ ಸೇರಿಕೊಂಡ ದೀಪಿಕಾ
Deepika Padukone

Updated on: May 23, 2025 | 12:42 PM

ನಟಿ ದೀಪಿಕಾ ಪಡುಕೋಣೆ (Deepika Padukone) ತಾಯ್ತನದ ಬಳಿಕ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ಅವರಿಗೆ ಒಂದರ ಹಿಂದೊಂದು ಆಫರ್​ಗಳು ಬರುತ್ತಿವೆ. ಈಗಾಗಲೇ ಅವರು ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಕ್ಕೂ ಸಹ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಸಂಭಾವನೆ ವಿಷಯದಲ್ಲಿ ಒಮ್ಮತಕ್ಕೆ ಬಾರದ ಕಾರಣ ಆ ಸಿನಿಮಾದಿಂದ ದೀಪಿಕಾ ಹೊರಬಂದಿದ್ದು ಅಲ್ಲು ಅರ್ಜುನ್ ಸಿನಿಮಾ ಸೇರಿಕೊಂಡಿದ್ದಾರೆ.

ಹೌದು, ಪ್ರಭಾಸ್ ಸಿನಿಮಾದಿಂದ ಹೊರಬಂದಿರುವ ದೀಪಿಕಾ ಪಡುಕೋಣೆ ಈಗ ಅಲ್ಲು ಅರ್ಜುನ್ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿ ಆಗಿದ್ದಾರೆ. ಆದರೆ ಈ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ಮಾತ್ರವೇ ನಾಯಕಿಯಲ್ಲ. ಅವರೊಟ್ಟಿಗೆ ಇನ್ನೂ ಮೂವರು ನಾಯಕಿಯರು ಸಿನಿಮಾನಲ್ಲಿ ಇರಲಿದ್ದಾರೆ.

ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನ ಮಾಡುತ್ತಿರುವ ಫ್ಯೂಚರಿಸ್ಟಿಕ್ ಫ್ಯಾಂಟಸಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಯಾವುದೋ ಲೋಕದಲ್ಲಿ ನಡೆಯುವ ಸೂಪರ್ ಹೀರೋ ಕತೆ ಇದಾಗಿದೆ. ಸಿನಿಮಾಕ್ಕಾಗಿ ಈಗಾಗಲೇ ಹಾಲಿವುಡ್​ನ ಹಲವು ಖ್ಯಾತ ಸ್ಟುಡಿಯೋಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಸಿನಿಮಾದ ಪ್ರೀ ಪ್ರೊಡಕ್ಷನ್ ಈಗಾಗಲೇ ಶುರುವಾಗಿದೆ.

ಇದನ್ನೂ ಓದಿ:ಡಿಮ್ಯಾಂಡ್ ಮಾಡೋಕೆ ಶುರು ಮಾಡಿದ ದೀಪಿಕಾ ಪಡುಕೋಣೆ; ಕೈ ತಪ್ಪಿತು ಬಿಗ್ ಆಫರ್

ಈ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಜಾನ್ಹವಿ ಕಪೂರ್, ಮೃಣಾಲ್ ಠಾಕೂರ್ ಮತ್ತು ಭಾಗ್ಯಶ್ರೀ ಬೋರ್ಸೆ ಸಹ ನಾಯಕಿಯಾಗಿರಲಿದ್ದಾರೆ. ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಅಲ್ಲು ಅರ್ಜುನ್ ಮೂರು ಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಸಿನಿಮಾಕ್ಕೆ ನಾಯಕಿಯರೂ ಹೆಚ್ಚಾಗಿ ಇರಲಿದ್ದಾರೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ದುಬಾರಿ ಸಂಭಾವನೆ ಕೇಳಿದರು ಎಂಬ ಕಾರಣಕ್ಕೆ ಅವರನ್ನು ಸಿನಿಮಾದಿಂದ ಕೈಬಿಡಲಾಗಿದ್ದು, ದೀಪಿಕಾರ ಸ್ಥಾನಕ್ಕೆ ಕನ್ನಡತ ನಟಿ ರುಕ್ಮಿಣಿ ವಸಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಕೆಲ ಮೂಲಗಳ ಪ್ರಕಾರ, ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡುಕೋನೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆಯಾಗಿ ಕೇಳಿದ್ದರಂತೆ. ಈಗ ಅಲ್ಲು ಅರ್ಜುನ್ ಸಿನಿಮಾಕ್ಕೂ ಸಹ ದೀಪಿಕಾ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆಯಲಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Fri, 23 May 25