‘ಧುರಂಧರ್ 2’ ಅಡ್ವಾನ್ಸ್ ಬುಕ್ಕಿಂಗ್‌: 24 ಗಂಟೆಯಲ್ಲಿ 8 ಕೋಟಿ ರೂ. ಬೆಲೆಯ ಟಿಕೆಟ್ ಸೇಲ್

ಮಾರ್ಚ್ 18ರಂದು ‘ಧುರಂಧರ್ 2’ ಸಿನಿಮಾದ ಪ್ರೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿದೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಿದ್ದು, ಜನರು ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಕೇವಲ 24 ಗಂಟೆಯಲ್ಲಿ ಪೇಯ್ಡ್ ಪ್ರೀಮಿಯರ್ ಟಿಕೆಟ್ ಬುಕಿಂಗ್​​ನಿಂದ 8 ಕೋಟಿ ರೂ. ಕಲೆಕ್ಷನ್ ಆಗಿದೆ.

‘ಧುರಂಧರ್ 2’ ಅಡ್ವಾನ್ಸ್ ಬುಕ್ಕಿಂಗ್‌: 24 ಗಂಟೆಯಲ್ಲಿ 8 ಕೋಟಿ ರೂ. ಬೆಲೆಯ ಟಿಕೆಟ್ ಸೇಲ್
Dhurandhar 2

Updated on: Mar 08, 2026 | 9:32 AM

ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧಾರ್ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಧುರಂಧರ್ 2’ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಲು ಸಿದ್ಧವಾಗಿದೆ. ಮಾರ್ಚ್ 19ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆ ಆಗಲಿದ್ದು, ಮಾರ್ಚ್ 18ರಂದೇ ಪೇಯ್ಡ್ ಪ್ರೀಮಿಯರ್ ಶೋಗಳು (Dhurandhar 2 Paid Premiere) ನಡೆಯಲಿವೆ. ಶನಿವಾರ (ಮಾರ್ಚ್ 7) ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಆರಂಭವಾದ ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿ ಈ ಸಿನಿಮಾ ಅಬ್ಬರದ ಸಾಧನೆ ಮಾಡಿದೆ. ಬುಕ್ಕಿಂಗ್ ಆರಂಭವಾದ ಕೇವಲ 24 ಗಂಟೆಗಳಲ್ಲಿ 87,000 ಟಿಕೆಟ್‌ಗಳು ಮಾರಾಟವಾಗಿವೆ.

ಪ್ರಮುಖ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಆದ ‘ಬುಕ್‌ ಮೈ ಶೋ’ ಒಂದರಲ್ಲೇ 87.81 ಸಾವಿರ ಟಿಕೆಟ್‌ಗಳು ಮಾರಾಟ ಆಗಿರುವುದು ಚಿತ್ರದ ಮೇಲಿರುವ ನಿರೀಕ್ಷೆಯನ್ನು ತೋರಿಸುತ್ತದೆ. ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, ಪ್ರತಿ ಗಂಟೆಗೆ ಸರಾಸರಿ 7,500 ಟಿಕೆಟ್‌ಗಳು ಮಾರಾಟವಾಗುತ್ತಿವೆ. ಇದರಿಂದಾಗಿ ಬುಕಿಂಗ್ ಶುರುವಾದ ಮೊದಲ ಎರಡು ಗಂಟೆಯಲ್ಲೇ 4 ಕೋಟಿ ಕಲೆಕ್ಷನ್ ಆಗಿದೆ.

Sacnilk ವರದಿಯ ಪ್ರಕಾರ, ಬುಕ್ಕಿಂಗ್ ಆರಂಭವಾದ ಕೇವಲ ಎರಡು ಗಂಟೆಗಳಲ್ಲಿ ಚಿತ್ರವು ವಿಶ್ವದಾದ್ಯಂತ 4 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ಪಿವಿಆರ್, ಐನಾಕ್ಸ್ ಮತ್ತು ಸಿನಿಪೊಲಿಸ್‌ನಂತಹ ದೊಡ್ಡ ಮಲ್ಟಿಪ್ಲೆಕ್ಸ್ಗಳಿಂದಲೇ 2.50 ಕೋಟಿ ರೂಪಾಯಿ ಹರಿದುಬಂದಿದೆ. ದೆಹಲಿ-ಎನ್‌ಸಿಆರ್‌ನಂತಹ ನಗರಗಳಲ್ಲಿ ‘ಸೂಪರ್ ಬ್ಲಾಕ್‌ಬಸ್ಟರ್ ಪ್ಲಸ್’ ಎಂಬ ಹೊಸ ಪ್ರೀಮಿಯಂ ಕೆಟಗರಿ ಪರಿಚಯಿಸಲಾಗಿದ್ದು, ಅಲ್ಲಿ ಟಿಕೆಟ್ ದರ 2,500 ರೂಪಾಯಿ ವರೆಗೂ ಇದೆ.

ಮಾರ್ಚ್ 18ರಂದು ನಡೆಯಲಿರುವ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಈಗಾಗಲೇ ಚಿತ್ರವು 8.06 ಕೋಟಿ ರೂಪಾಯಿ ಸಂಗ್ರಹಿಸಿದೆ. ಹಿಂದಿ ವರ್ಷನ್​ನಿಂದ 7 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ತೆಲುಗಿನಿಂದ 5 ಲಕ್ಷ ರೂ., ತಮಿಳಿನಿಂದ 4 ಲಕ್ಷ ರೂ. ಹಾಗೂ ಕನ್ನಡದಿಂದ 28,000 ರೂಪಾಯಿ ಕಲೆಕ್ಷನ್ ಆಗಿದೆ. ಇದು ಪೇಯ್ಡ್ ಪ್ರೀಮಿಯರ್​ಗೆ ಈವರೆಗೂ ಆಗಿರುವ ಕಲೆಕ್ಷನ್ ಲೆಕ್ಕ ಮಾತ್ರ. ಮೊದಲ ದಿನದ ಕಲೆಕ್ಷನ್ ಇನ್ನೂ ಜಾಸ್ತಿ ಆಗಲಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರಕ್ಕೆ ಮಾತ್ರ ಯುದ್ಧದ ಬಿಸಿ: ‘ಧುರಂಧರ್ 2’ ಸಿನಿಮಾಗೆ ಚಿಂತೆ ಇಲ್ಲ ಯಾಕೆ?

‘ಧುರಂಧರ್’ ಮೊದಲ ಭಾಗವು ಭಾರತದಲ್ಲಿ 28 ಕೋಟಿ ರೂಪಾಯಿಗಳ ಭರ್ಜರಿ ಓಪನಿಂಗ್ ಪಡೆದಿತ್ತು ಮತ್ತು ಒಟ್ಟಾರೆ ವಿಶ್ವದಾದ್ಯಂತ 1303.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿತ್ತು. ಈಗ ಎರಡನೇ ಭಾಗವು ಆ ಎಲ್ಲಾ ದಾಖಲೆಗಳನ್ನು ಅಳಿಸಿಹಾಕುವ ಮುನ್ಸೂಚನೆ ನೀಡಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us