ಮಾರ್ಕ್, 45, ಡೆವಿಲ್ ಬಂದರೂ ತಗ್ಗಿಲ್ಲ ‘ಧುರಂಧರ್’ ಹವಾ; 21ನೇ ದಿನವೂ 26 ಕೋಟಿ ರೂ. ಗಳಿಕೆ

ಯಾವುದೇ ಹೊಸ ಸಿನಿಮಾಗಳು ಬಿಡುಗಡೆ ಆದರೂ ಕೂಡ ‘ಧುರಂಧರ್’ ಸಿನಿಮಾದ ಕಲೆಕ್ಷನ್ ತಗ್ಗುತ್ತಲೇ ಇಲ್ಲ. ‘ಅವತಾರ್ 3’, ‘ಮಾರ್ಕ್’, ‘45’, ‘ದಿ ಡೆವಿಲ್’ ಸಿನಿಮಾಗಳ ಎದುರಲ್ಲಿ ‘ಧುರಂಧರ್’ ಚಿತ್ರ ಅಬ್ಬರಿಸುತ್ತಿದೆ. ವಿಶ್ವಾದ್ಯಂತ ಈ ಸಿನಿಮಾದ ಕಲೆಕ್ಷನ್ ಈಗಾಗಲೇ ಸಾವಿರ ಕೋಟಿ ರೂಪಾಯಿ ದಾಟಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಮಾರ್ಕ್, 45, ಡೆವಿಲ್ ಬಂದರೂ ತಗ್ಗಿಲ್ಲ ‘ಧುರಂಧರ್’ ಹವಾ; 21ನೇ ದಿನವೂ 26 ಕೋಟಿ ರೂ. ಗಳಿಕೆ
Dhurandhar

Updated on: Dec 26, 2025 | 3:35 PM

ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ (Dhurandhar) ಸಿನಿಮಾ ಬಿಡುಗಡೆ ಆಗಿ 22 ದಿನಗಳು ಕಳೆದಿವೆ. ಈ ಚಿತ್ರ ತೆರೆಕಂಡ ಬಳಿಕ ಸ್ಟಾರ್ ನಟರ ಹಲವು ಸಿನಿಮಾಗಳು ಬಿಡುಗಡೆ ಆದವು. ಹಾಗಿದ್ದರೂ ಕೂಡ ‘ಧುರಂಧರ್’ ಚಿತ್ರದ ಹವಾ ಕಡಿಮೆ ಆಗಿಲ್ಲ. ಇಂದಿಗೂ ಕೂಡ ಈ ಸಿನಿಮಾ ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ಭಾರತದಲ್ಲಿ ಈ ಸಿನಿಮಾದ ಕಲೆಕ್ಷನ್ 633 ಕೋಟಿ ರೂಪಾಯಿ ಕೋಟಿ ಆಗಿದೆ. ಇನ್ನೂ ಹಲವು ದಿನಗಳ ಕಾಲ ಕಲೆಕ್ಷನ್ (Dhurandhar Box Office Collection) ಅಬ್ಬರ ಮುಂದುವರಿಯಲಿದೆ.

ಪ್ರತಿ ವೀಕೆಂಡ್​​ನಲ್ಲಿ ‘ಧುರಂಧರ್’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಾ ಬಂದಿದೆ. ಕ್ರಿಸ್ಮಸ್ ದಿನವೂ ಈ ಚಿತ್ರ ಅತ್ಯುತ್ತಮವಾಗಿ ಕಮಾಯಿ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಅದು ನಿಜವಾಗಿದೆ. ಕ್ರಿಸ್ಮಸ್ ಹಬ್ಬದ ದಿನ, ಅಂದರೆ ಡಿಸೆಂಬರ್ 25ರಂದು ಸರ್ಕಾರಿ ರಜೆ ಇರುವ ಕಾರಣ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿದ್ದಾರೆ. ಅದು ‘ಧುರಂಧರ್’ ಸಿನಿಮಾಗೆ ಪ್ಲಸ್ ಆಗಿದೆ.

ಡಿಸೆಂಬರ್ 25ರಂದು ‘ಧುರಂಧರ್’ ಚಿತ್ರಕ್ಕೆ ಬರೋಬ್ಬರಿ 26 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬಿಡುಗಡೆ ಆಗಿ 21ನೇ ದಿನಕ್ಕೆ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡುವುದು ಎಂದರೆ ತಮಾಷೆಯೇ ಅಲ್ಲ. ಇದೇ ದಿನ ಕನ್ನಡ ಮತ್ತು ತಮಿಳಿನಲ್ಲಿ ‘ಮಾರ್ಕ್’ ಸಿನಿಮಾ ಬಿಡುಗಡೆ ಆಗಿದೆ. ‘45’ ಚಿತ್ರ ಕೂಡ ತೆರೆಕಂಡಿದೆ. ಆ ಸಿನಿಮಾಗಳ ಪೈಪೋಟಿ ನಡುವೆಯೂ ‘ಧುರಂಧರ್’ ಮೇಲುಗೈ ಸಾಧಿಸಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ಅಂದುಕೊಂಡ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಕರ್ನಾಟಕದಲ್ಲಿ ‘ದಿ ಡೆವಿಲ್’, ‘ಮಾರ್ಕ್’, ‘45’ ಸಿನಿಮಾಗಳು ಪ್ರದರ್ಶನ ಕಾಣುತ್ತಿರುವಾಗಲೇ ‘ಧುರಂಧರ್’ ಕೂಡ ಪೈಪೋಟಿ ನೀಡುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರದ ನೂರಾರು ಶೋಗಳು ಹೌಸ್​ಫುಲ್ ಪ್ರದರ್ಶನ ಕಾಣುತ್ತಿವೆ ಎಂಬುದು ವಿಶೇಷ. ವಾರಾಂತ್ಯ ಮಾತ್ರವಲ್ಲದೇ ಬಾಕಿ ದಿನಗಳಲ್ಲಿ ಕೂಡ ‘ಧುರಂಧರ್’ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬಳಿಕ ‘ದೃಶ್ಯಂ 3’ ಚಿತ್ರದಿಂದ ಹೊರಬಂದ ಅಕ್ಷಯ್ ಖನ್ನಾ?

ಡಿಸೆಂಬರ್ 27ರ ಶನಿವಾರ ಹಾಗೂ ಡಿ.28ರ ಭಾನುವಾರ ‘ಧುರಂಧರ್’ ಸಿನಿಮಾ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಅನಾಯಾಸವಾಗಿ 750 ಕೋಟಿ ರೂಪಾಯಿ ಗಳಿಸಲಿದೆ. ವಿದೇಶದ ಕಲೆಕ್ಷನ್ ಕೂಡ ಸೇರಿದರೆ ಈಗಾಗಲೇ 1000 ಕೋಟಿ ರೂಪಾಯಿ ದಾಟಿದೆ. ಆದಿತ್ಯ ಧಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.