‘ಧುರಂಧರ್’ ತಯಾರಾಗಿದ್ದು ಹೇಗೆ ಗೊತ್ತಾ? ಚಿತ್ರಮಂದಿರದಲ್ಲೇ ನೋಡಿ ಮೇಕಿಂಗ್ ವಿಡಿಯೋ

ಬ್ಲಾಕ್ ಬಸ್ಟರ್ ‘ಧುರಂಧರ್’ ಸಿನಿಮಾದ ತೆರೆ ಹಿಂದಿನ ವಿಷಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಅಂಥವರಿಗೆ ಸಿಹಿ ಸುದ್ದಿ ಇಲ್ಲಿದೆ. ಈ ಚಿತ್ರದ ಮೇಕಿಂಗ್ ವಿಡಿಯೋವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಡಾಕ್ಯುಮೆಂಟರಿ ರೂಪದಲ್ಲಿ ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ.

‘ಧುರಂಧರ್’ ತಯಾರಾಗಿದ್ದು ಹೇಗೆ ಗೊತ್ತಾ? ಚಿತ್ರಮಂದಿರದಲ್ಲೇ ನೋಡಿ ಮೇಕಿಂಗ್ ವಿಡಿಯೋ
Dhurandhar 2 Movie Shooting
Image Credit source: Jio Studios

Updated on: Apr 21, 2026 | 5:54 PM

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಚಿತ್ರಗಳು ಸದ್ಯ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿವೆ. 2025ರ ಡಿಸೆಂಬರ್‌ನಲ್ಲಿ ಮೊದಲ ಭಾಗ ಮತ್ತು 2026ರ ಮಾರ್ಚ್ 19ರಂದು ಎರಡನೇ ಭಾಗ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಿದ್ದವು. ಇದೀಗ ರಣವೀರ್ ಸಿಂಗ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ‘ಧುರಂಧರ್’ ಸಿನಿಮಾದ ಮೇಕಿಂಗ್ ವಿಡಿಯೋವನ್ನು (BTS Video) ದೊಡ್ಡ ಪರದೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಬಿಡುಗಡೆಯಾದ ಕೇವಲ ಒಂದು ತಿಂಗಳೊಳಗೆ ‘ಧುರಂಧರ್ 2’ ಸಿನಿಮಾ ಅನೇಕ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಭಾರತದ ಮೂರನೇ ಅತಿದೊಡ್ಡ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಚಿತ್ರದ ಯಶಸ್ಸಿನ ಬೆನ್ನಲ್ಲೇ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯಾಗಿ ಮೇಕಿಂಗ್ ವಿಡಿಯೋ ಬಿಡುಗಡೆ ಆಗಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಚಿತ್ರದ ಶೂಟಿಂಗ್ ಹಂತದ ಸ್ವಾರಸ್ಯಕರ ಘಟನೆಗಳು, ತಾಂತ್ರಿಕ ಸವಾಲುಗಳು ಮತ್ತು ನಟ-ನಟಿಯರ ವಿಶೇಷ ಸಂದರ್ಶನಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಡಾಕ್ಯುಮೆಂಟರಿ ರೂಪಿಸಲಾಗುತ್ತಿದೆ. ಅದನ್ನು 2026ರ ಕೊನೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಸಿದ್​ಧವಾಗಿದೆ ಎನ್ನಲಾಗಿದೆ.

ಚಿತ್ರಮಂದಿರದಲ್ಲಿ ರಿಲೀಸ್ ಆದ ನಂತರ ಇದೇ ಸಾಕ್ಷ್ಯಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ ವೀಕ್ಷಣೆಗೆ ಲಭ್ಯವಾಗಲಿದೆ. ಈ ಪ್ಲ್ಯಾನ್ ಇರುವ ಕಾರಣದಿಂದಲೇ ರಣವೀರ್ ಸಿಂಗ್, ಅರ್ಜುನ್ ರಾಮ್​ಪಾಲ್ ಮತ್ತು ನಿರ್ದೇಶಕ ಆದಿತ್ಯ ಧರ್ ಸದ್ಯಕ್ಕೆ ಮಾಧ್ಯಮಗಳಿಂದ ದೂರವಿದ್ದು, ತಮ್ಮ ಮೊದಲ ಅಧಿಕೃತ ಸಂದರ್ಶನಗಳನ್ನು ಈ ಮೇಕಿಂಗ್ ಸಿನಿಮಾದಲ್ಲೇ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಧುರಂಧರ್ ಕಥೆ ಕದ್ದ ಆರೋಪ: ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಹೈಕೋರ್ಟ್ ಸೂಚನೆ

ಹಾಗಂತ ‘ಧುರಂಧರ್’ ತಂಡದವರು ಚಿತ್ರಮಂದಿರದಲ್ಲಿ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವುದು ಸಂಪೂರ್ಣ ಹೊಸ ಐಡಿಯಾ ಏನಲ್ಲ. ಈ ಹಿಂದೆ ವಿಕ್ರಾಂತ್ ಮಾಸ್ಸಿ ಅಭಿನಯದ ‘12th ಫೇಲ್’ ಚಿತ್ರದ ಮೇಕಿಂಗ್ ವಿಡಿಯೋವನ್ನು ‘ಜೀರೋ ಸೆ ರಿಸ್ಟಾರ್ಟ್’ ಹೆಸರಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಅದೇ ಹಾದಿಯಲ್ಲಿ ‘ಧುರಂಧರ್’ ಚಿತ್ರತಂಡ ಕೂಡ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us