ಒಟಿಟಿಗೆ ಬಂತು ‘ಧುರಂಧರ್’: ಆದರೆ ಹುಸಿಯಾಯ್ತು ನಿರೀಕ್ಷೆ

Dhurandhar movie: ಚಿತ್ರಮಂದಿರಗಳಲ್ಲಿ ದೂಳೆಬ್ಬಿಸಿದ ‘ಧುರಂಧರ್’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುವಾಗ ಯಾವುದೇ ಸೆನ್ಸಾರ್ ಇಲ್ಲದೆ ಬಿಡುಗಡೆ ಆಗುತ್ತದೆ ಎಂಬ ನಿರೀಕ್ಷೆ ಅಭಿಮಾನಿಗಳಿತ್ತು, ಇದೀಗ ‘ಧುರಂಧರ್’ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ, ಆದರೆ ಚಿತ್ರಮಂದಿರಕ್ಕಿಂತಲೂ ಹೆಚ್ಚಿಗೆ ಸೆನ್ಸಾರ್​​ ಮಾಡಲಾಗಿದೆ ಎಂದು ಸಿನಿಮಾ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಒಟಿಟಿಗೆ ಬಂತು ‘ಧುರಂಧರ್’: ಆದರೆ ಹುಸಿಯಾಯ್ತು ನಿರೀಕ್ಷೆ
Dhurandhar Movie Poster

Updated on: Jan 30, 2026 | 11:55 AM

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆದ ‘ಧುರಂಧರ್’ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳಲ್ಲಿ ಒಂದೆನೆಸಿಕೊಂಡಿದೆ. ಸಿನಿಮಾದ ಕತೆ ನಡೆಯುವುದು ಪಾಕಿಸ್ತಾನದಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ, ಪಾಕಿಸ್ತಾನದ ಭಯೋತ್ಪಾದನೆ, ಎರಡೂ ದೇಶಗಳ ನಡುವಿನ ದ್ವೇಷ, ವೈಮನಸ್ಯ ಇನ್ನಿತರೆ ವಿಷಯಗಳ ಬಗ್ಗೆ ಸಾಕಷ್ಟು ಸಂಭಾಷಣೆಗಳು ಸಿನಿಮಾನಲ್ಲಿವೆ. ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆದಾಗ ಕೆಲವಾರು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗಿತ್ತು. ಇದೀಗ ಸಿನಿಮಾ ಒಟಿಟಿಗೆ ಬಂದಿದ್ದು, ಇಲ್ಲಿಯೂ ಸಹ ಸಿನಿಮಾ ಪ್ರೇಮಿಗಳಿಗೆ ನಿರಾಸೆ ಎದುರಾಗಿದೆ.

ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುವಾಗ ಯಾವುದೇ ಸೆನ್ಸಾರ್ ಇಲ್ಲದೆ ಬಿಡುಗಡೆ ಆಗುತ್ತದೆ ಎಂಬ ನಿರೀಕ್ಷೆ ಅಭಿಮಾನಿಗಳಿತ್ತು, ಇದೀಗ ‘ಧುರಂಧರ್’ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ, ಆದರೆ ಚಿತ್ರಮಂದಿರಕ್ಕಿಂತಲೂ ಹೆಚ್ಚಿಗೆ ಸೆನ್ಸಾರ್​​ ಮಾಡಲಾಗಿದೆ ಎಂದು ಸಿನಿಮಾ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರಮಂದಿರದಲ್ಲಿ ಬಿಡುಗಡೆ ಆದ ಆವೃತ್ತಿಗಿಂತಲೂ ಹತ್ತು ನಿಮಿಷ ಕಡಿಮೆ ಅವಧಿಯ ಆವೃತ್ತಿಯನ್ನು ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ಹಲವಾರು ದೃಶ್ಯಗಳು, ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗಿದೆ. ‘ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಿದ ಹೊರತಾಗಿಯೂ ಸಿನಿಮಾದ ದೃಶ್ಯಗಳನ್ನು, ಸಂಭಾಷಣೆಗಳನ್ನು ಸೆನ್ಸಾರ್ ಮಾಡುವ ಅವಶ್ಯಕತೆ ಏನಿತ್ತು’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:‘ಧುರಂಧರ್ 2’ ಚಿತ್ರಕ್ಕಾಗಿ ಮತ್ತೆ ಶೂಟಿಂಗ್ ಮಾಡಲ್ಲ ಅರ್ಜುನ್ ರಾಮ್​ಪಾಲ್

‘ಧುರಂಧರ್’ ಸಿನಿಮಾ ಒಟಿಟಿಯಲ್ಲಿ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಆಗಿದೆ. ಇದು ಕನ್ನಡದಲ್ಲಿ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿದೆ. ಸಿನಿಮಾ ಮಲಯಾಳಂ ಭಾಷೆಯಲ್ಲಿಯೂ ವೀಕ್ಷಣೆಗೆ ಲಭ್ಯವಿಲ್ಲ. ಗಮನಿಸಬೇಕಾದ ಅಂಶವೆಂದರೆ ‘ಧುರಂಧರ್’ ಸಿನಿಮಾ ಬೆಂಗಳೂರಿನಲ್ಲಿ ಉತ್ತಮ ಪ್ರದರ್ಶನವನ್ನು ಕಂಡಿತ್ತು, ಈಗಲೂ ಸಹ ನಗರದ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಲೇ ಇದೆ.

‘ಧುರಂಧರ್’ ಸಿನಿಮಾನಲ್ಲಿ ರಣ್ವೀರ್ ಸಿಂಗ್, ಅಕ್ಷಯ್ ಖನ್ನ, ಅರ್ಜುನ್ ರಾಮ್​​ಪಾಲ್, ಸಂಜಯ್ ದತ್, ಆರ್ ಮಾಧವನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಅನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ‘ಧುರಂಧರ್ 2’ ಸಿನಿಮಾದ ಘೋಷಣೆ ಈಗಾಗಲೇ ಮಾಡಲಾಗಿದ್ದು, ಸಿನಿಮಾ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ