
ಬಾಲಿವುಡ್ನಲ್ಲಿ ನಟ ಅನುಪಮ್ ಖೇರ್ (Anupam Kher) ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಎಲ್ಲ ಬಗೆಯ ಪಾತ್ರಗಳಿಗೂ ಬಣ್ಣ ಹಚ್ಚುವ ಮೂಲಕ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ವರ್ಷ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅವರು ಮಾಡಿದ್ದ ಕಾಶ್ಮೀರಿ ಪಂಡಿತನ ಪಾತ್ರ ಸಖತ್ ಹೈಲೈಟ್ ಆಗಿತ್ತು. ಈಗ ಅವರಿಗೆ ‘ಎಮರ್ಜೆನ್ಸಿ’ (Emergency) ಸಿನಿಮಾದಲ್ಲಿ ಕೂಡ ಒಂದು ಪ್ರಮುಖ ಪಾತ್ರ ನೀಡಲಾಗಿದೆ. ಹೌದು, ಈ ಬಹುನಿರೀಕ್ಷಿತ ಚಿತ್ರದಲ್ಲಿ ಅವರು ಜಯಪ್ರಕಾಶ್ ನಾರಾಯಣ್ ಪಾತ್ರವನ್ನು ಮಾಡುತ್ತಿದ್ದಾರೆ. ಈಗ ಆ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಈ ಸಿನಿಮಾಗೆ ಕಂಗನಾ ರಣಾವತ್ ನಾಯಕಿ ಮತ್ತು ನಿರ್ದೇಶಕಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರವನ್ನು ಕಂಗನಾ ರಣಾವತ್ (Kangana Ranaut) ಮಾಡುತ್ತಿದ್ದಾರೆ.
ಕೆಲವೇ ದಿನಗಳ ಹಿಂದೆ ‘ಎಮರ್ಜೆನ್ಸಿ’ ಸಿನಿಮಾ ತಂಡದಿಂದ ಕಂಗನಾ ರಣಾವತ್ ಅವರ ಫಸ್ಟ್ ಲುಕ್ ಪೋಸ್ಟರ್ ಟೀಸರ್ ರಿಲೀಸ್ ಆಗಿತ್ತು. ಇಂದಿರಾ ಗಾಂಧಿ ಅವತಾರದಲ್ಲಿ ಕಂಗನಾರನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಈಗ ಅನುಪಮ್ ಖೇರ್ ಅವರ ಪೋಸ್ಟರ್ ಹೊರಬಂದಿದೆ. ಈ ಲುಕ್ ಕೂಡ ಸಿನಿಪ್ರಿಯರಿಗೆ ಇಷ್ಟ ಆಗಿದೆ. ಇನ್ನೂ ಹಲವು ರಾಜಕಾರಣಿಗಳ ಪಾತ್ರ ಈ ಸಿನಿಮಾದಲ್ಲಿ ಇರಲಿದ್ದು, ಆ ಪಾತ್ರಗಳನ್ನು ಯಾವ ಕಲಾವಿದರು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
‘ಭಾರತದ ಇತಿಹಾಸದಲ್ಲಿ ಮಹಾತ್ಮ ಗಾಂಧಿ ನಂತರದ ಅತಿ ಹೆಚ್ಚು ಪ್ರಬಲ ವ್ಯಕ್ತಿ ಆಗಿದ್ದವರು ಜಯಪ್ರಕಾಶ್ ನಾರಾಯಣ್. ಜನರ ಮೇಲೆ ಅವರು ಬೀರಿದ ಪ್ರಭಾವ ಅಪಾರ. ಅವರ ಪಾತ್ರಕ್ಕೆ ಅನುಪಮ್ ಖೇರ್ ಹೆಚ್ಚು ಸೂಕ್ತ ಆಗುತ್ತಾರೆ. ಅವರು ಈ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಕ್ಕೆ ತುಂಬ ಸಂತಸ ಆಗಿದೆ’ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಕಂಗನಾ ರಣಾವತ್ ಅವರ ವೃತ್ತಿಜೀವನದಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಬಹುಮುಖ್ಯ ಆಗಲಿದೆ. ಅದಕ್ಕಾಗಿ ಅವರು ಸಖತ್ ತಯಾರಿ ಮಾಡಿಕೊಂಡು ಶೂಟಿಂಗ್ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪಾತ್ರವನ್ನು ಮಾಡುತ್ತಿರುವುದಕ್ಕೆ ಅನುಪಮ್ ಖೇರ್ ಅವರಿಗೆ ಹೆಮ್ಮೆ ಇದೆ. ಇದು ಅವರ 527ನೇ ಸಿನಿಮಾ ಎಂಬುದು ವಿಶೇಷ. ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Published On - 4:14 pm, Fri, 22 July 22