
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕಾಗಿ ನಡೆಸುತ್ತಿದ್ದು, ಘಟನೆ ನಡೆದ ಮೊದಲ 15 ಗಂಟೆಗಳಲ್ಲಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲು ಯಶಸ್ವಿ ಆಗಿದ್ದರು. ತನಿಖೆ ಮುಂದುವರೆದಂತೆ ಪ್ರಕರಣದ ಹಿಂದೆ ಬೃಹತ್ ಜಾಲವೇ ಕೆಲಸ ಮಾಡಿರುವುದು ತಿಳಿದು ಬಂದಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ಬಂಧಿಸಲಾಗಿದ್ದು ಅವರಲ್ಲಿ ಇಬ್ಬರು ಯುವತಿಯರು ಸಹ ಸೇರಿದ್ದಾರೆ. ಜೊತೆಗೆ ಒಬ್ಬ ಅಪ್ರಾಪ್ತನೂ ಸಹ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎನ್ನಲಾಗಿದೆ.
ದೆಹಲಿ ಪೊಲೀಸರು ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಮಂಗಳವಾರ) ಒಟ್ಟು ನಾಲ್ವರನ್ನು ಬಂಧಿಸಿದೆ. ಅವರಲ್ಲಿ ಇಬ್ಬರು ಯುವತಿಯರು ಸೇರಿದ್ದು, ಈ ಯುವತಿಯರು ಪ್ರಕರಣದಲ್ಲಿ ಬಹಳ ಮಹತ್ವದ ಪಾತ್ರವಹಿಸಿದ್ದಾರೆ ಎನ್ನಲಾಗಿದೆ. ರಾಧಾ, ಬಬಿತಾ, ಸುಮಿತ್ ಮತ್ತು ಕುನಾಲ್ ಎಂಬುವರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ನಾಲ್ವರನ್ನೂ ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ.
ಪ್ರಕರಣದಲ್ಲಿ ಯುವತಿಯರಾದ ಬಬಿತಾ ಮತ್ತು ರಾಧಾ ಅವರು ಪ್ರಮುಖ ಪಾತ್ರ ವಹಿಸಿದ್ದು, ಪ್ರಕರಣದಲ್ಲಿ ಬಳಕೆ ಆದ ಬಂದೂಕುಗಳನ್ನು ಇವರೇ ಹಸ್ತಾಂತರ ಮಾಡಿದ್ದರು ಎನ್ನಲಾಗಿದೆ. ಕುನಾಲ್ ಮತ್ತು ಸುಮಿತ್ ಅವರುಗಳು ಬಂದೂಕುಗಳನ್ನು ಅರೇಂಜ್ ಮಾಡಿ ಅದನ್ನು ರಾಧಾ ಮತ್ತು ಬಬಿತಾ ಅವರಿಗೆ ನೀಡಿದ್ದರೆ ಆ ಬಂದೂಕನ್ನು ದೆಹಲಿಯಿಂದ ಮುಂಬೈಗೆ ರೈಲಿನಲ್ಲಿ ತೆಗೆದುಕೊಂಡು ಬಂದಿದ್ದ ರಾಧಾ, ಬಬಿತಾ ಅದನ್ನು ಪ್ರಮುಖ ಶೂಟರ್ಗಳಿಗೆ ತಲುಪುವಂತೆ ಮಾಡಿದ್ದರು.
ಇದನ್ನೂ ಓದಿ:ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಎಐ ವಿಡಿಯೋ, ಸುಳ್ಳು ಮಾಹಿತಿ ವಿರುದ್ಧ ಎಚ್ಚರಿಕೆ
ರಾಧಾ ಮತ್ತು ಬಬಿತಾ ಅವರು ಬಂದೂಕನ್ನು ರೈಲಿನಲ್ಲಿ ತರುತ್ತಿರುವಾಗ ಹಾಗೂ ಅದಕ್ಕೆ ಮುಂಚೆ ಸಹ ಕುನಾಲ್ ಎಂಬಾತನೊಟ್ಟಿಗೆ ಸತತ ಸಂಪರ್ಕದಲ್ಲಿದ್ದರು. ಇವರು ಎನ್ಸ್ಕ್ರಿಪ್ಟೆಡ್ ಅಪ್ಲಿಕೇಶನ್ ಮೂಲಕ ಸಂದೇಶಗಳನ್ನು ರವಾನೆ ಮಾಡಿಕೊಂಡಿದ್ದರು. ಇನ್ನು ಈ ದಾಳಿಯ ಹೊಣೆ ಹೊತ್ತಿರುವ ಅನಿಲ್ ಪಂಡಿತ್ ಸಹ ಕುನಾಲ್ ಜೊತೆ ಸತತ ಸಂಪರ್ಕದಲ್ಲಿದ್ದು ಎಲ್ಲರಿಗೂ ಸೂಚನೆಗಳನ್ನು ನೀಡುತ್ತಿದ್ದ. ಅನಿಲ್ ನೀಡಿದ ಸೂಚನೆಗಳನ್ನು ಕುನಾಲ್ ಈ ಯುವತಿಯರಿಗೆ ತಲುಪಿಸುತ್ತಿದ್ದ. ಮುಂಬೈಗೆ ಬಂದಿದ್ದ ಯುವತಿಯರು ಹೋಟೆಲ್ ಒಂದರಲ್ಲಿ ತಂಗಿದ್ದರು. ಅಲ್ಲಿಗೆ ಬಂದಿದ್ದ ಒಬ್ಬ ಅಪ್ರಾಪ್ತನಿಗೆ ಬಂದೂಕು ಇದ್ದ ಬ್ಯಾಗನ್ನು ಹಸ್ತಾಂತರಿಸಿದ್ದರು. ಅವರು ಬಂದೂಕು ನೀಡಿದ್ದ ದಿನವೇ ಸಂಜೆ ವೇಳೆಗೆ ಗುಂಡಿನ ದಾಳಿ ಮಾಡಲಾಗಿತ್ತು.
ರಾಧಾ ಮತ್ತು ಬಬಿತಾ ಉತ್ತರ ಪ್ರದೇಶದವರಾದರೆ ಬಂದೂಕು ಸರಬರಾಜು ಮಾಡಿದ್ದ ಸುಮಿತ್ ಮತ್ತು ಕುನಾಲ್ ಅವರು ಹರಿಯಾಣಾದವರಾಗಿದ್ದಾರೆ. ರಾಧಾ ಮತ್ತು ಬಬಿತಾ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದರೆ ಇನ್ನಿಬ್ಬರನ್ನು ಹರಿಯಾಣಾದ ಸೋನ್ಪುರದಲ್ಲಿ ಬಂಧಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:06 am, Wed, 21 October 26