
ಬಹುನಿರೀಕ್ಷಿತ ‘ಪಠಾಣ್’ (Pathaan) ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರದಿಂದ ನಟ ಶಾರುಖ್ ಖಾನ್ (Shah Rukh Khan) ಅವರು ಅದ್ದೂರಿಯಾಗಿ ಕಮ್ಬ್ಯಾಕ್ ಮಾಡಲಿದ್ದಾರೆ. ಈಗಾಗಲೇ ಅವರು ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಭಾನುವಾರ (ಸೆ.25) ಅವರೊಂದು ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದರು. ಶರ್ಟ್ಲೆಸ್ ಆಗಿ ಶಾರುಖ್ ಪೋಸ್ ನೀಡಿದ್ದಾರೆ. ಹಾಗಂತ ಅವರು ಈ ರೀತಿ ಫೋಟೋ ಶೇರ್ ಮಾಡಿಕೊಂಡಿದ್ದು ಇದೇ ಮೊದಲೇನೂ ಅಲ್ಲ. ಆದರೆ ಈ ಬಾರಿ ಅವರು ಬರೆದಿರುವ ಕ್ಯಾಪ್ಷನ್ ಹೆಚ್ಚು ಹೈಲೈಟ್ ಆಗಿದೆ. ಅದನ್ನು ಕಂಡು ಪತ್ನಿ ಗೌರಿ ಖಾನ್ (Gauri Khan) ಗಲಿಬಿಲಿ ಆಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಇದಕ್ಕೆ ಕಮೆಂಟ್ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡುತ್ತಿರುವ ‘ಪಠಾಣ್’ ಚಿತ್ರಕ್ಕಾಗಿ ಶಾರುಖ್ ಖಾನ್ ಅವರು ದೇಹ ಹುರಿಗೊಳಿಸಿಕೊಂಡಿದ್ದಾರೆ. 8 ಪ್ಯಾಕ್ ಆ್ಯಬ್ಸ್ ಮಾಡಿಕೊಂಡು ನಟಿಸಿದ್ದಾರೆ. ಅದನ್ನು ಹೈಲೈಟ್ ಮಾಡುವ ಸಲುವಾಗಿಯೇ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ತಮ್ಮ ಶರ್ಟ್ ಜೊತೆ ತಾವೇ ಮಾತನಾಡುತ್ತಿರುವ ರೀತಿಯಲ್ಲಿ ಈ ಹೊಸ ಫೋಟೋಗೆ ಶಾರುಖ್ ಕ್ಯಾಪ್ಷನ್ ನೀಡಿದ್ದಾರೆ.
‘ನೀನು ಇದ್ದಿದ್ದರೆ ಹೇಗಿರುತ್ತಿತ್ತು. ಈ ವಿಷಯದಲ್ಲಿ ನಿನಗೆ ಅಚ್ಚರಿ ಆಗುತ್ತಿತ್ತು. ನೀನು ಎಷ್ಟೊಂದು ನಗುತ್ತಿದ್ದೆ’ ಎಂದು ಶಾರುಖ್ ಖಾನ್ ಅವರು ಶರ್ಟ್ ಜೊತೆ ಮಾತನಾಡಿಕೊಂಡಿದ್ದಾರೆ. ಇದನ್ನು ನೋಡಿ ‘ಅಯ್ಯೋ ದೇವರೇ.. ಈಗ ಇವರು ತಮ್ಮ ಶರ್ಟ್ ಜೊತೆಗೂ ಮಾತನಾಡಲು ಶುರುಮಾಡಿದ್ರು’ ಎಂದು ಗೌರಿ ಖಾನ್ ಕಮೆಂಟ್ ಮಾಡಿದ್ದಾರೆ. ಟೈಗರ್ ಶ್ರಾಫ್, ರಿಚಾ ಚಡ್ಡಾ ಮುಂತಾದವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ವೈರಲ್ ಆಗಿರುವ ಈ ಫೋಟೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಕಟ್ಟುಮಸ್ತಾದ ಈ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ತಮ್ಮ ನೆಚ್ಚಿನ ನಟನನ್ನು ಬೆಳ್ಳಿಪರದೆ ಮೇಲೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಡಿದ್ದಾರೆ.
ಸದ್ಯ ಶಾರುಖ್ ಖಾನ್ ಅವರು ‘ಪಠಾಣ್’ ಮಾತ್ರವಲ್ಲದೇ ‘ಡಂಕಿ’, ‘ಜವಾನ್’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. 2023ರ ಜನವರಿ 25ರಂದು ‘ಪಠಾಣ್’ ರಿಲೀಸ್ ಆಗಲಿದೆ. ನಂತರ ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಿಡುಗಡೆ ಆಗಲಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.