ಬಾಲಿವುಡ್ನ ಖ್ಯಾತ ನಟ ಗೋವಿಂದ (Govinda) ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಮೊದಲಿನ ಹಾಗೆ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿಲ್ಲ. ಒಂದು ಕಾಲದಲ್ಲಿ ಪ್ರತಿ ವರ್ಷಕ್ಕೆ ಗೋವಿಂದ ನಟನೆಯ 6-7 ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಆದರೆ ಈಗ ಅವರು ಗಡಿಬಿಡಿಯಲ್ಲಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಮ್ಯೂಸಿಕ್ ವಿಡಿಯೋಗಳ (Music Video) ಮೂಲಕ ಜನರನ್ನು ರಂಜಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರೇಕ್ಷಕರಿಗೆ ಕಚಗುಳಿ ಇಡುವಂತಹ ಹಾಸ್ಯ ಮತ್ತು ಮನ ಸೆಳೆಯುವಂತಹ ಡ್ಯಾನ್ಸ್ ಮೂಲಕ ಫೇಮಸ್ ಆದವರು ಗೋವಿಂದ. ಅವರ ಡ್ಯಾನ್ಸ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಫಿದಾ ಆಗಿದ್ದುಂಟು. ಈಗ ಗೋವಿಂದ ಅವರು ಹೊಸ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಗೀತೆಯಲ್ಲಿ ಅವರು ಹೆಜ್ಜೆ ಹಾಕಿದ ಪರಿಗೆ ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ‘ಪ್ರೇಮ್ ಕರೂ ಚು..’ ಎಂಬ ಈ ಹಾಡಿಗೆ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ (Ganesh Acharya) ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.
ಗೋವಿಂದ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಅದರಲ್ಲಿ ಈ ಹೊಸ ಹಾಡು ಬಿಡುಗಡೆ ಆಗಿದೆ. ನಟಿ ಜೂಹೀ ಖಾನ್ ಜೊತೆ ಗೋವಿಂದ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅವರಿಗೆ ಈಗ 58 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ‘ವಾವ್.. ಏನು ಹೇಳಬೇಕು ಅಂತ ನನಗೆ ತಿಳಿಯುತ್ತಿಲ್ಲ. ನಿಮ್ಮ ಎನರ್ಜಿ ಬೆಂಕಿಯಂತಿದೆ. ‘ಪುಷ್ಪ’ಗಿಂತಲೂ ಭಯಂಕರವಾಗಿದೆ’ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.
1998ರಲ್ಲಿ ಗೋವಿಂದ ಅವರು ತಮ್ಮ ಮೊದಲ ಮ್ಯೂಸಿಕ್ ಆಲ್ಬಂ ರಿಲೀಸ್ ಮಾಡಿದ್ದರು. ನಂತರ 2013ರಲ್ಲಿ ‘ಗೋರಿ ಥೇರೆ ನೈನಾ’ ಆಲ್ಬಂ ಬಿಡುಗಡೆ ಆಯಿತು. ಈಗ ಸಿಂಗಲ್ಸ್ ಮೂಲಕ ಅವರು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದು ಅವು ಇನ್ನಷ್ಟೇ ಬಿಡುಗಡೆ ಆಗಬೇಕಿವೆ. ‘ಸಿನಿಮಾ ಮಾಡದೆಯೂ ಒಂದು ಕಥೆಯನ್ನು ನಿರೂಪಿಸುವ ಸಾಮರ್ಥ್ಯ ಹಾಡಿಗೆ ಇದೆ ಅಂತ ನಾನು ನಂಬಿದ್ದೇನೆ. ಪ್ರೇಕ್ಷಕರಿಗೆ ನಾನು ಅತ್ಯುತ್ತಮವಾದದ್ದನ್ನು ನೀಡಲು ಸದಾ ಪ್ರಯತ್ನಿಸುತ್ತೇನೆ’ ಎಂದು ಗೋವಿಂದ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:17 am, Thu, 9 June 22