ಸೆಲೆಬ್ರಿಟಿಗಳಿಗೆ ಆ್ಯಪಲ್ ಕಂಪನಿಯ ವಸ್ತುಗಳನ್ನು ಬಳಸುವುದು ಒಂದು ಹೆಮ್ಮೆ. ಬಹುತೇಕ ಎಲ್ಲ ಸೆಲೆಬ್ರಿಟಿಗಳು ಆ್ಯಪಲ್ ಕಂಪನಿಯ ಐಫೋನ್, ಐಪ್ಯಾಡ್ (Apple iPad) ಬಳಸುತ್ತಾರೆ. ಅಮೆರಿಕದ ಈ ಶ್ರೀಮಂತ ಕಂಪನಿಯ ವಿರುದ್ಧ ಈಗ ಅನೇಕ ಸೆಲೆಬ್ರಿಟಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಗರಂ ಆಗಿದ್ದಾರೆ. ಆ್ಯಪಲ್ ಕಂಪನಿಯ ಒಂದು ಹೊಸ ಜಾಹೀರಾತನ್ನು (Apple iPad Advertisement) ಅವರು ಖಾರವಾಗಿ ಖಂಡಿಸಿದ್ದಾರೆ. ಅಷ್ಟಕ್ಕೂ ಈ ಜಾಹೀರಾತಿನಲ್ಲಿ ಏನಿದೆ? ಹೃತಿಕ್ ರೋಷನ್ (Hrithik Roshan) ಅವರು ಅಸಮಾಧಾನ ಹೊರಹಾಕಲು ಕಾರಣ ಏನು? ಇಲ್ಲಿದೆ ಮಾಹಿತಿ..
ಕೆಲವೇ ದಿನಗಳ ಹಿಂದೆ ಆ್ಯಪಲ್ ಕಂಪನಿಯು ತಮ್ಮ ಹೊಸ ಐಪ್ಯಾಡ್ನ ಜಾಹೀರಾತನ್ನು ಬಿಡುಗಡೆ ಮಾಡಿದೆ. ‘ಐಪ್ಯಾಡ್ ಪ್ರೋ’ ಎಷ್ಟು ಪವರ್ಫುಲ್ ಆಗಿದೆ ಎಂಬುದನ್ನು ತಿಳಿಸುವ ಸಲುವಾಗಿ ಈ ಜಾಹೀರಾತನ್ನು ಸಿದ್ಧಪಡಿಸಲಾಗಿದೆ. ಪುಸ್ತಕಗಳು, ಸಂಗೀತ ಸಾಧನಗಳು, ಟಿವಿ, ಗ್ರಾಮೋಫೋನ್, ಗೊಂಬೆ, ಪೇಂಟಿಂಗ್ಸ್, ಕಲಾಕೃತಿಗಳು, ಸ್ಪೀಕರ್, ಕ್ಯಾಮೆರಾ ಮುಂತಾದ ವಸ್ತುಗಳನ್ನು ದೊಡ್ಡ ಕ್ರಶರ್ ಮೂಲಕ ನಾಶಪಡಿಸುವ ದೃಶ್ಯ ಇದರಲ್ಲಿ ಇದೆ. ಆ ಎಲ್ಲ ಸಾಧನಗಳ ಕೆಲಸವನ್ನು ಕೇವಲ ಒಂದು ಐಪ್ಯಾಡ್ ಮಾಡುತ್ತದೆ ಎಂಬುದನ್ನು ಗ್ರಾಹಕರಿಗೆ ತಿಳಿಸುವುದು ಈ ಜಾಹೀರಾತಿನ ಉದ್ದೇಶ.
ಈ ಜಾಹೀರಾತನ್ನು ನೋಡಿದ ಅನೇಕ ಸೆಲೆಬ್ರಿಟಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಜಾಹೀರಾತಿನಿಂದ ಸಿನಿಮಾ, ಸಂಗೀತ, ಚಿತ್ರಕಲೆ, ಬರವಣಿಗೆ ಮುಂತಾದ ವಿಷಯಗಳಿಗೆ ಅವಮಾನ ಮಾಡಲಾಗಿದೆ ಎಂದು ಹಾಲಿವುಡ್ನ ಸೆಲೆಬ್ರಿಟಿಗಳು ಕೂಡ ಅಭಿಪ್ರಾಯ ತಿಳಿಸಿದ್ದಾರೆ. ನಟ ಹೃತಿಕ್ ರೋಷನ್ ಅವರಿಗೂ ಈ ಜಾಹೀರಾತು ಇಷ್ಟ ಆಗಿಲ್ಲ.
Meet the new iPad Pro: the thinnest product we’ve ever created, the most advanced display we’ve ever produced, with the incredible power of the M4 chip. Just imagine all the things it’ll be used to create. pic.twitter.com/6PeGXNoKgG
— Tim Cook (@tim_cook) May 7, 2024
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೃತಿಕ್ ರೋಷನ್ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ‘ಆ್ಯಪಲ್ ಕಂಪನಿಯ ಈ ಹೊಸ ಜಾಹೀರಾತು ಎಷ್ಟು ಕಳಪೆಯಾಗಿದೆ ಮತ್ತು ಅಜ್ಞಾನದಿಂದ ಕೂಡಿದೆ’ ಎಂದು ಹೃತಿಕ್ ರೋಷನ್ ಅವರು ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಹಲವು ಕಲಾ ಪ್ರಕಾರಗಳಿಗೆ ಆ್ಯಪಲ್ ಕಂಪನಿಯು ಈ ಜಾಹೀರಾತಿನ ಮೂಲಕ ಅವಮಾನ ಮಾಡಿದೆ ಎಂದು ನೆಟ್ಟಿಗರು ಕೂಡ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹೃತಿಕ್ ರೋಷನ್, ಜಾನ್ ಅಬ್ರಾಹಂ ಸಹಪಾಠಿಗಳು ಎಂಬುದು ನಿಮಗೆ ಗೊತ್ತಾ? ಫೋಟೋ ಸಾಕ್ಷಿ
ಸಿನಿಮಾ ವಿಚಾರಕ್ಕೆ ಬರುವುದಾದರೆ, ಹೃತಿಕ್ ರೋಷನ್ ಅವರು ‘ವಾರ್ 2’ ಸಿನಿಮಾದ ಕೆಲಸಗಳಲ್ಲಿ ಬ್ಯಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಕೂಡ ನಟಿಸುತ್ತಿದ್ದಾರೆ. ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ‘ಯಶ್ ರಾಜ್ ಫಿಲ್ಮ್ಸ್’ ನಿರ್ಮಾಣದ ಈ ಬಹುನಿರೀಕ್ಷಿತ ಸಿನಿಮಾಗೆ ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.