ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ (Bollywood) ಎಂಬ ಚರ್ಚೆ ಈ ಮೊದಲಿನಿಂದಲೂ ಇದೆ. ಬಹುತೇಕ ಸ್ಟಾರ್ಸ್ಗಳು ಈ ಬಗ್ಗೆ ತಮ್ಮತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಿದೆ. ಬಾಲಿವುಡ್ನ ಅನೇಕರು ಈ ಚರ್ಚೆ ಬಂದಾಗ ನಾವೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದ್ದಿದೆ. ಈಗ ಸಲ್ಮಾನ್ ಖಾನ್ (Salman Khan) ಅವರು ಈ ವಿಚಾರವಾಗಿ ಮಾತನಾಡಿದ್ದಾರೆ. ದಕ್ಷಿಣ ಭಾರತದ ಹೀರೋಗಳು ಹಾಗೂ ಬಾಲಿವುಡ್ ಮಂದಿ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ. ಹೀಗೆ ಮಾಡಿದರೆ ಸಿನಿಮಾ ಸಾವಿರಾರು ಕೋಟಿ ಕಲೆಕ್ಷನ್ ಮಾಡಲಿದೆ ಅನ್ನೋದು ಅವರ ಅಭಿಪ್ರಾಯ.
ಸಲ್ಮಾನ್ ಖಾನ್ ಅವರು ತೆಲುಗಿನ ‘ಗಾಡ್ಫಾದರ್’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಚಿತ್ರದ ಹಿಂದಿ ಟೀಸರ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಈ ವೇಳೆ ಅವರಿಗೆ ದಕ್ಷಿಣ ಭಾರತದಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಸಲ್ಮಾನ್ ಖಾನ್ ಉತ್ತರ ನೀಡಿದ್ದಾರೆ.
ಅನೇಕ ಸ್ಟಾರ್ಗಳು ಹಾಲಿವುಡ್ಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದಿದೆ. ಆದರೆ, ಸಲ್ಮಾನ್ ಖಾನ್ಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಬೇಕು, ಇಲ್ಲಿ ಕೆಲಸ ಮಾಡಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. ‘ಎಲ್ಲರಿಗೂ ಹಾಲಿವುಡ್ಗೆ ಹೋಗಬೇಕೆಂದಿರುತ್ತದೆ. ಆದರೆ ನನಗೆ ದಕ್ಷಿಣ ಭಾರತದಲ್ಲಿ ಕೆಲಸ ಮಾಡಬೇಕು ಎಂದಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಸಿನಿಮಾ ಮಾಡುವ ಬಿಸ್ನೆಸ್ ಎಷ್ಟಿರಬಹುದು ಅಂದಾಜಿಸಿ. ಸಿನಿಮಾಗಳು ಸಾಮಾನ್ಯವಾಗಿ 300-400 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತವೆ. ಆದರೆ, ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸ್ಟಾರ್ಗಳು ಒಂದಾದರೆ 3000-4000 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು. ಜನರು ಹಿಂದಿಯಲ್ಲೂ ಸಿನಿಮಾ ವೀಕ್ಷಿಸುತ್ತಾರೆ, ದಕ್ಷಿಣದಲ್ಲೂ ಸಿನಿಮಾ ನೋಡುತ್ತಾರೆ’ ಎಂದು ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
‘ಅವರ (ಚಿರಂಜೀವಿ) ಅಭಿಮಾನಿಗಳು ನನ್ನನ್ನೂ ನೋಡುತ್ತಾರೆ. ನನ್ನ ಅಭಿಮಾನಿಗಳು ಅವರನ್ನು ನೋಡುತ್ತಾರೆ. ಅವರ ಅಭಿಮಾನಿಗಳು ನನ್ನ ಅಭಿಮಾನಿಗಳಾಗುತ್ತಾರೆ, ನನ್ನ ಫ್ಯಾನ್ಸ್ ಅವರ ಅಭಿಮಾನಿಗಳಾಗುತ್ತಾರೆ. ಎಲ್ಲರೂ ಬೆಳೆಯುತ್ತಾರೆ. ಗುಂಪು ದೊಡ್ಡದಾಗುತ್ತದೆ’ ಎಂದಿದ್ದಾರೆ ಸಲ್ಮಾನ್ ಖಾನ್. ಇದರಿಂದ ಸಿನಿಮಾ ಬಿಸ್ನೆಸ್ ಹೆಚ್ಚುತ್ತದೆ ಎಂಬುದು ಅವರ ಅಭಿಪ್ರಾಯ.
ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್ ‘ಗಾಡ್ಫಾದರ್’. ಚಿರಂಜೀವಿ, ಸಲ್ಮಾನ್ ಖಾನ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಕ್ಟೋಬರ್ 5ಕ್ಕೆ ಸಿನಿಮಾ ರಿಲೀಸ್ ಆಗಲಿದೆ.