ನಟನೆ, ನಿರ್ದೇಶನ, ನಿರ್ಮಾಣದ ಬಳಿಕ ಸಂಗೀತ ಸಂಯೋಜನೆ ಮಾಡ್ತಾರಾ ಕಂಗನಾ? ನೆಟ್ಟಿಗರಿಗೆ ಮೂಡಿದೆ ಗುಮಾನಿ

‘ಎಮರ್ಜೆನ್ಸಿ’ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ. ಜಿ.ವಿ. ಪ್ರಕಾಶ್​ ಅವರ ಸಂಗೀತ ನಿರ್ದೇಶನದಲ್ಲಿ ಕಂಗನಾ ರಣಾವತ್​ ಹಸ್ತಕ್ಷೇಪ ಮಾಡಬಹುದು ಎಂಬುದು ಕೆಲವರ ಅನಿಸಿಕೆ.

ನಟನೆ, ನಿರ್ದೇಶನ, ನಿರ್ಮಾಣದ ಬಳಿಕ ಸಂಗೀತ ಸಂಯೋಜನೆ ಮಾಡ್ತಾರಾ ಕಂಗನಾ? ನೆಟ್ಟಿಗರಿಗೆ ಮೂಡಿದೆ ಗುಮಾನಿ
ಕಂಗನಾ
Follow us
ಮದನ್​ ಕುಮಾರ್​
|

Updated on: Apr 26, 2023 | 7:30 AM

ಬೇರೆ ನಟಿಯರಿಗಿಂತ ಕಂಗನಾ ರಣಾವತ್​ (Kangana Ranaut) ಅವರು ಕೊಂಚ ಡಿಫರೆಂಟ್​. ಕ್ಯಾಮೆರಾ ಮುಂದೆ ಕೇವಲ ಗ್ಲಾಮರಸ್​ ಆಗಿ ಕಾಣಿಸಿಕೊಂಡು ಸುಮ್ಮನಾಗುವ ನಟಿ ಅವರಲ್ಲ. ಸಿನಿಮಾದ ಎಲ್ಲ ವಿಭಾಗಗಳಲ್ಲೂ ಅವರು ತೊಡಗಿಕೊಳ್ಳುತ್ತಾರೆ. ನಟನೆ ಮಾತ್ರವಲ್ಲದೇ ಅವರು ನಿರ್ದೇಶನದಲ್ಲೂ ಆಸಕ್ತಿ ಹೊಂದಿ​ದ್ದಾರೆ. ಅವರ ನಿರ್ದೇಶನದಲ್ಲಿ ‘ಎಮರ್ಜೆನ್ಸಿ’ ಸಿನಿಮಾ (Emergency Movie) ಮೂಡಿಬರುತ್ತಿದೆ. ಈ ಚಿತ್ರದ ನಿರ್ಮಾಣದಲ್ಲಿ ಅವರು ಪಾಲುದಾರಿಕೆ ಹೊಂದಿ​ದ್ದಾರೆ. ಹಾಗಾಗಿ ಅವರು ನಿರ್ಮಾಪಕಿ ಕೂಡ ಹೌದು. ಈ ಸಿನಿಮಾವನ್ನು ನಿರ್ಮಾಣ ಮಾಡಲು ಅವರು ಆಸ್ತಿ ಅಡವಿಟ್ಟಿರುವ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಈಗ ಅವರು ಸಂಗೀತ ಸಂಯೋಜನೆ ವಿಭಾಗದಲ್ಲೂ ಮೂಗು ತೂರಿಸುತ್ತಿದ್ದಾರಾ ಎಂಬ ಗುಮಾನಿ ಮೂಡಿದೆ. ಅದಕ್ಕೆ ಕಾರಣ ಆಗಿರುವುದ ಒಂದು ವಿಡಿಯೋ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಎಮರ್ಜೆನ್ಸಿ’ ಸಿನಿಮಾಗೆ ಜಿ.ವಿ. ಪ್ರಕಾಶ್​ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಕಂಗನಾ ರಣಾವತ್​ ಅವರು ಜಿ.ವಿ. ಪ್ರಕಾಶ್​ ಜೊತೆ ಇರುವ ವಿಡಿಯೋವನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಸಂಗೀತ ನಿರ್ದೇಶಕನ ಪ್ರತಿಭೆಯನ್ನು ಅವರು ಹೊಗಳಿದ್ದರು. ಅದನ್ನು ನೋಡಿದ ನೆಟ್ಟಿಗರಿಗೆ ಬೇರೆ ಗುಮಾನಿ ಮೂಡಿದೆ.

ಇದನ್ನೂ ಓದಿ: ಕಂಗನಾ ರಣಾವತ್​-ಕರಣ್​ ಜೋಹರ್​ ನಡುವಿನ ಜಗಳ ಜೋರಾಯ್ತು; ಪರೋಕ್ಷವಾಗಿ ಕುಟುಕಿದ ನಿರ್ಮಾಪಕ

ಜಿ.ವಿ. ಪ್ರಕಾಶ್​ ಅವರ ಸಂಗೀತ ಸಂಯೋಜನೆಯ ಕೆಲಸದಲ್ಲಿ ಕಂಗನಾ ಅವರು ಮೂಗು ತೂರಿಸಬಹುದು ಎಂಬುದು ಕೆಲವರ ಅನಿಸಿಕೆ. ಯಾಕೆಂದರೆ ಈ ಹಿಂದೆ ‘ಮಣಿಕರ್ಣಿಕ’ ಸಿನಿಮಾದಲ್ಲಿ ಕಂಗನಾ ಅವರು ನಿರ್ದೇಶಕನ ಸ್ಥಾನವನ್ನು ಆಕ್ರಮಿಸಿಕೊಂಡಿದ್ದರು. ಅದೇ ರೀತಿ ಅವರು ‘ಎಮರ್ಜೆನ್ಸಿ’ ಚಿತ್ರದ ಮ್ಯೂಸಿಕ್​ ವಿಭಾಗದಲ್ಲೂ ಏನಾದರೂ ಹಸ್ತಕ್ಷೇಪ ಮಾಡುತ್ತಿದ್ದಾರಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಮೂವೀ ಮಾಫಿಯಾ ವಿಚಾರ ಬಂದ್ರೆ ನೀವೆಲ್ಲ ಸೈಲೆಂಟ್ ಆಗ್ತೀರಿ’; ಮತ್ತೆ ಸಿಟ್ಟಾದ ಕಂಗನಾ ರಣಾವತ್

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಸಿದ್ಧವಾಗುತ್ತಿದೆ. ಆ ಕಾಲಘಟ್ಟದಲ್ಲಿ ಭಾರತದ ರಾಜಕೀಯದಲ್ಲಿ ಬದಲಾವಣೆ ತರಲು ಕಾರಣರಾದ ಅನೇಕ ನಾಯಕರ ಪಾತ್ರಗಳು ಈ ಸಿನಿಮಾದಲ್ಲಿ ಹೈಲೈಟ್​ ಆಗಲಿವೆ. ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಂಗನಾ ರಣಾವತ್​ ನಟಿಸಿದ್ದಾರೆ. ಈ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ.

ಈ ಸಿನಿಮಾದಲ್ಲಿ ಶ್ರೇಯಸ್​ ತಲ್ಪಡೆ, ಅನುಪಮ್​ ಖೇರ್​, ಮಿಲಿಂದ್​ ಸೋಮನ್​, ಸತೀಶ್​ ಕೌಶಿಕ್​, ಮಹಿಮಾ ಚೌಧರಿ ಮುಂತಾದವರು ನಟಿಸುತ್ತಿದ್ದಾರೆ. ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್​ ಅವರ ಲುಕ್​ ನೋಡಿದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಆದಷ್ಟು ಬೇಗ ಈ ಚಿತ್ರ ಬಿಡುಗಡೆ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.