83ರ ಇಳಿ ವಯಸ್ಸಿನಲ್ಲಿ ನಟ ಜಿತೇಂದ್ರ ಭರ್ಜರಿ ಡೀಲ್, 855 ಕೋಟಿ ಬಾಚಿಕೊಂಡ ನಟ

Jeetendra: ಬಾಲಿವುಡ್​ನ ಹಿರಿಯ ನಟ ಜೀತೆಂದ್ರ. ಕನ್ನಡದಲ್ಲಿ ಅವರ ಬಗ್ಗೆ ‘ನಾನು ಜೀತೆಂದ್ರ, ನೀನು ಶ್ರೀದೇವಿ’ ಎಂಬ ಹಾಡೇ ಇದೆ. ಇದೀಗ ಜೀತೆಂದ್ರ ಅವರಿಗೆ 83 ವರ್ಷ ವಯಸ್ಸು. ಚಿತ್ರರಂಗದಿಂಲೂ ದೂರವೇ ಇದ್ದಾರೆ. ಈ ಇಳಿ ವಯಸ್ಸಿನಲ್ಲಿ ಭರ್ಜರಿ ಡೀಲ್ ಒಂದನ್ನು ಜೀತೆಂದ್ರ ಮಾಡಿದ್ದಾರೆ. ಡೀಲ್​​ನಿಂದಾಗಿ ಬರೋಬ್ಬರಿ 855 ಕೋಟಿ ಹಣವನ್ನು ಬಾಚಿಕೊಂಡಿದ್ದಾರೆ.

83ರ ಇಳಿ ವಯಸ್ಸಿನಲ್ಲಿ ನಟ ಜಿತೇಂದ್ರ ಭರ್ಜರಿ ಡೀಲ್, 855 ಕೋಟಿ ಬಾಚಿಕೊಂಡ ನಟ
Jeetendra

Updated on: Jun 08, 2025 | 9:26 PM

ಅದೃಷ್ಟವೆನ್ನುವುದು ಯಾವಾಗ ಹೇಗೆ ಬರುತ್ತದೆ ಹೇಳಲಾಗುವುದಿಲ್ಲ. ಬಾಲಿವುಡ್​ನ ದಿಗ್ಗಜ ನಟರಲ್ಲಿ ನಟ ಜಿತೇಂದ್ರ ಸಹ ಒಬ್ಬರು. 83 ವರ್ಷ ವಯಸ್ಸಿನ ಜಿತೇಂದ್ರ ಅವರು ಹಿಂದಿಯ ಹಲವಾರು ಸೂಪರ್-ಡೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್​ಗೂ ಮುಂಚೆಯೇ ಸ್ಟಾರ್ ಆಗಿ ಬಾಲಿವುಡ್​ನಲ್ಲಿ ಮೆರೆದವರವರು. ನಾಯಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಜಿತೇಂದ್ರ ಅವರು ಗಳಿಸಿದ ಹಣದಲ್ಲಿ ಸಾಕಷ್ಟು ಆಸ್ತಿಯನ್ನೂ ಮಾಡಿದ್ದಾರೆ. ಇದೀಗ ಅವರ ಇಳಿವಯಸ್ಸಿನಲ್ಲಿ ಅವರಿಗೆ ಅದೃಷ್ಟವೊಂದು ಖುಲಾಯಿಸಿದೆ.

ಜಿತೇಂದ್ರ ಅವರು ಮುಂಬೈ ಹಾಗೂ ಅದರ ಹೊರವಲಯದಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದಾರೆ. ಮುಂಬೈನ ಅಂಧೇರಿ ಬಳಿ ದೊಡ್ಡದಾದ ಸ್ಥಳವೊಂದು ಜಿತೇಂದ್ರ ಅವರ ಕುಟುಂಬದ ಒಡೆತನದಲ್ಲಿತ್ತು. ಇದೀಗ ಆ ಸ್ಥಳವನ್ನು ಭಾರಿ ದೊಡ್ಡ ಮೊತ್ತಕ್ಕೆ ಎನ್​ಟಿಟಿ ಗ್ಲೋಬಲ್ ಡಾಟಾ ಸೆಂಟರ್​​ಗೆ ಜಿತೇಂದ್ರ ಹಾಗೂ ಅವರ ಕುಟುಂಬ ಮಾರಾಟ ಮಾಡಿದೆ. ಆಸ್ತಿ ಮಾರಾಟದಿಂದ ಜಿತೇಂದ್ರ ಅವರಿಗೆ ಬಂದಿರುವ ಮೊತ್ತ 855 ಕೋಟಿ ರೂಪಾಯಿಗಳು!

ಮೇ 29, 2025 ರಂದು ಈ ಆಸ್ತಿ ಮಾರಾಟದ ನೊಂದಣಿ ಆಗಿದೆ. 2.39 ಎಕರೆ ಜಾಗವನ್ನು ಜಿತೇಂದ್ರ ಹಾಗೂ ಅವರ ಕುಟುಂಬ ಮಾರಾಟ ಮಾಡಿದೆ. ಮಾರಾಟ ಮಾಡಿರುವ ಸ್ಥಳದಲ್ಲಿ ಪ್ರಸ್ತುತ ಬಾಲಾಜಿ ಐಟಿ ಪಾರ್ಕ್ ಹಾಗೂ ಇನ್ನೂ ಎರಡು ಬಿಲ್ಡಿಂಗ್​ಗಳು ಇವೆ. ಎನ್​ಟಿಟಿ ಗ್ಲೋಬಲ್ ಡಾಟಾ ಸೆಂಟರ್​ನವರು ಈ ಸ್ಥಳವನ್ನು ಭಾರಿ ಮೊತ್ತ ಕೊಟ್ಟು ಖರೀದಿ ಮಾಡಿದ್ದು, ಈ ಕಂಪೆನಿ ಹಲವು ರೀತಿಯ ಐಟಿ ಸರ್ವೀಸ್ ಮತ್ತು ಕ್ಲೌಡ್ ಸರ್ವೀಸ್ ಅನ್ನು ಕೊಡುತ್ತಾ ಬಂದಿದೆ.

ಇದನ್ನೂ ಓದಿ:ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ನೋ ಎಂದ ಬಾಲಿವುಡ್ ನಟ, ಎಸ್ ಎಂದ ದಕ್ಷಿಣದ ಸ್ಟಾರ್ ನಟ

ಫ್ಯಾಂಥಿಯಾನ್ ಬಿಲ್ಡ್​ಕಾನ್ ಮತ್ತು ತುಶಾರ್ ಇನ್​ಫ್ರಾ ಡೆವೆಲಪರ್ಸ್​ ವತಿಯಿಂದ ಈ ಆಸ್ತಿ ಮಾರಾಟವಾಗಿದ್ದು, ಈ ಎರಡೂ ಕಂಪೆನಿಗಳು ಜಿತೇಂದ್ರ ಅವರ ಕುಟುಂಬಕ್ಕೆ ಸೇರಿದ್ದೇ ಆಗಿದೆ. ಆಸ್ತಿ ನೊಂದಣಿ ಶುಲ್ಕವಾಗಿ 8.69 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಜಿತೇಂದ್ರ ಅವರು ಮುಂಬೈನ ಕೆಲವು ಪ್ರೈಂ ಲೊಕೇಶನ್​ಗಳಲ್ಲಿ ಸ್ಥಳಗಳನ್ನು ಹೊಂದಿದ್ದು ತಮ್ಮ ಫ್ಯಾಂಥಿಯಾನ್ ಬಿಲ್ಡ್​ಕಾನ್ ಮತ್ತು ತುಶಾರ್ ಇನ್​ಫ್ರಾ ಡೆವೆಲಪರ್ಸ್ ಮೂಲಕ ರಿಯಲ್ ಎಸ್ಟೇಟ್ ಉದ್ಯಮವನ್ನು ಸಹ ಮಾಡುತ್ತಾರೆ.

ಜಿತೇಂದ್ರ ಅವರ ವಯಸ್ಸು ಈಗ 83 ಆಗಿದ್ದು ಕೊನೆಯದಾಗಿ ಅವರು 2021ರಲ್ಲಿ ಬಿಡುಗಡೆ ಆದ ವೆಬ್ ಸರಣಿಯಲ್ಲಿ ನಟಿಸಿದ್ದರು. ಈಗ ಅವರು ವಯಸ್ಸಿನ ಕಾರಣ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ