ನಟಿ ಜೂಹಿ ಚಾವ್ಲಾ (Juhi Chawla) ಅವರು ಈಗ ಸಿನಿಮಾಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಒಂದು ಕಾಲದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ಅವರು ಈಗ ಸಂಪೂರ್ಣವಾಗಿ ಸಂಸಾರದ ಕಡೆ ಗಮನ ಹರಿಸಿದ್ದಾರೆ. ಇತ್ತೀಚೆಗೆ ಅವರು ಮಗಳ (Juhi Chawla Daughter) ಜನ್ಮದಿನವನ್ನು ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ ಆ ಮೂಲಕ ಅವರು ಸುದ್ದಿ ಆಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮಕ್ಕಳ ಬರ್ತ್ಡೇ ಎಂದರೆ ಅದ್ದೂರಿತನ ಇರುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಡಂಭರದ ಪ್ರದರ್ಶನ ಮಾಡಲಾಗುತ್ತದೆ. ಆದರೆ ಜೂಹಿ ಚಾವ್ಲಾ ಅವರು ಅಂಥದ್ದಕ್ಕೆಲ್ಲ ಬ್ರೇಕ್ ಹಾಕಿದ್ದಾರೆ. ಪುತ್ರಿ ಜಾಹ್ನವಿ ಮೆಹ್ತಾ (Jahnavi Mehta) ಹುಟ್ಟುಹಬ್ಬಕ್ಕೆ ಸಾವಿರ ಗಿಡ ನೆಡುವ ಮೂಲಕ ಜೂಹಿ ಚಾವ್ಲಾ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ.
ಜೂಹಿ ಚಾವ್ಲಾ ಅವರ ಪುತ್ರಿ ಜಾಹ್ನವಿ ಮೆಹ್ತಾ ಈಗ 23ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ. ತಾಯಿಯಂತೆ ನಟಿಯಾಗಬೇಕು ಎಂದು ಜಾಹ್ನವಿ ಮೆಹ್ತಾ ಬಯಸಿಲ್ಲ. ಬದಲಿಗೆ ಅವರು ಬರಹಗಾರ್ತಿ ಆಗಬೇಕು ಎಂದು ತೀರ್ಮಾನಿಸಿದ್ದಾರೆ. ಆ ಕಾರಣದಿಂದ ಸ್ಟಾರ್ ಕಿಡ್ಗಳ ಗುಂಪಿನಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಈಗ ಅವರ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗಿದೆ.
ಹುಟ್ಟುಹಬ್ಬದ ದಿನ ಪೋಷಕರು ಏನು ಗಿಫ್ಟ್ ನೀಡುತ್ತಾರೆ ಎಂಬ ಕುತೂಹಲ ಮಕ್ಕಳಿಗೆ ಇರುತ್ತದೆ. ಒಂದೆರಡು ವರ್ಷಕ್ಕೆ ಹಾಳಾಗುವಂತಹ ಗಿಫ್ಟ್ ನೀಡುವ ಬದಲು, ಜೀವನ ಪೂರ್ತಿ ಜೊತೆಯಾಗಿ ಇರುವಂತಹ ಉಡುಗೊರೆ ನೀಡಲು ಜೂಹಿ ಚಾವ್ಲಾ ನಿರ್ಧರಿಸಿದ್ದಾರೆ. ಮಗಳ ಜನ್ಮದಿನದ ಪ್ರಯುಕ್ತ ಅವರು ಸಾವಿರ ಗಿಡಗಳನ್ನು ನೆಟ್ಟಿರುವುದಾಗಿ ಹೇಳಿದ್ದಾರೆ. ಆ ಮೂಲಕ ಅವರು ಪರಿಸರ ಪ್ರೇಮ ತೋರಿದ್ದಾರೆ.
ಇದನ್ನೂ ಓದಿ: ಜೂಹಿ ಚಾವ್ಲಾ ಮದುವೆ ಆಗಲು ಹೊರಟಿದ್ದ ಸಲ್ಲು; ತಂದೆಯಿಂದಲೇ ಬಂದಿತ್ತು ವಿರೋಧ
‘ನನ್ನ ಪುಟ್ಟ ಗೊಂಬೆ ಜಾಹ್ನವಿ ಸಲುವಾಗಿ, ಆಕೆಯ ಜನ್ಮದಿನದಂದು 1000 ಮರಗಳು. ಅವಳು ಮತ್ತು ಅವಳ ಪೀಳಿಗೆಯವರು ಶುದ್ಧವಾದ ಗಾಳಿ ಉಸಿರಾಡಲಿ, ನಕ್ಕು ನಲಿಯಲು ಅಳಿಲು, ಹಕ್ಕಿ, ಚಿಟ್ಟೆಗಳು ಬರಲಿ ಎಂಬ ಹಾರೈಕೆ ಮತ್ತು ಬಯಕೆ ನಮ್ಮದು. ಹ್ಯಾಪಿ ಬರ್ತ್ಡೇ’ ಎಂದು ಜೂಹಿ ಚಾವ್ಲಾ ಅವರು ಪೋಸ್ಟ್ ಮಾಡಿದ್ದಾರೆ. ಮಗಳ ಜೊತೆ ಇರುವ ಫೋಟೋ ಮತ್ತು ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಜೂಹಿ ಚಾವ್ಲಾ ಅವರು ತುಂಬ ಬ್ಯುಸಿ ನಟಿ ಆಗಿದ್ದರು. ಹಿಂದಿ, ಕನ್ನಡ, ತಮಿಳು, ತೆಲುಗು, ಬೆಂಗಾಲಿ ಮುಂತಾದ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದರು. ಕನ್ನಡದಲ್ಲಿ ಅವರು ನಟಿಸಿದ ‘ಪ್ರೇಮಲೋಕ’, ‘ಕಿಂದರಿ ಜೋಗಿ’ ಸಿನಿಮಾಗಳು ಈಗಲೂ ಅಭಿಮಾನಿಗಳ ಫೇವರಿಟ್ ಲಿಸ್ಟ್ನಲ್ಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.