
ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾದ ಶೂಟಿಂಗ್ ವೇಳೆ ನಡೆದ ಭೀಕರ ದುರಂತವನ್ನು ನಟಿ ಕಾಜಲ್ ಅಗರ್ವಾಲ್ ಮತ್ತೆ ನೆನಪಿಸಿಕೊಂಡಿದ್ದಾರೆ. 2020ರ ಫೆಬ್ರವರಿಯಲ್ಲಿ ಚೆನ್ನೈನ ಫಿಲ್ಮ್ ಸಿಟಿಯಲ್ಲಿ ಬೃಹತ್ ಕ್ರೇನ್ ಕುಸಿದು ಮೂವರು ಮೃತಪಟ್ಟಿದ್ದರು. ಆ ಕರಾಳ ರಾತ್ರಿಯಲ್ಲಿ ತಾವು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಭಯಾನಕ ಅನುಭವವನ್ನು ಕಾಜಲ್ ಈಗ ಬಿಚ್ಚಿಟ್ಟಿದ್ದಾರೆ. ದೈವಿಕ ಶಕ್ತಿಯೇ ಅಂದು ತಮ್ಮ ಪ್ರಾಣ ಉಳಿಸಿತು ಎಂದು ಅವರು ಭಾವುಕರಾಗಿದ್ದಾರೆ.
ಸಿಂಗಾಪುರದ ಮೇಡಮ್ ಟುಸ್ಸಾಡ್ಸ್‌ನಲ್ಲಿ ತಮ್ಮ ಮೇಣದ ಪ್ರತಿಮೆ ಅನಾವರಣಗೊಂಡ ಕೆಲವೇ ದಿನಗಳಲ್ಲಿ ಈ ದುರಂತ ನಡೆದಿತ್ತು. ಆ ದಿನ 80 ವರ್ಷದ ವೃದ್ಧೆಯ ಪಾತ್ರಕ್ಕಾಗಿ ಕಾಜಲ್ ಪ್ರಾಸ್ತೆಟಿಕ್ ಮೇಕಪ್ ಹಾಕಿಕೊಂಡಿದ್ದರು. ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಎಲ್ಲರೂ ಮಾನಿಟರ್ ಸುತ್ತ ಕುಳಿತಿದ್ದರು. ಏಕಾಏಕಿ ಗದ್ದಲ ಶುರುವಾದಾಗ ಎಲ್ಲರಂತೆ ಕಾಜಲ್ ಕೂಡ ಓಡಲು ಶುರು ಮಾಡಿದರು. ಆಗ ಟೇಬಲ್‌ಗೆ ತಾಗಿ ಕೆಳಗೆ ಬಿದ್ದ ಅವರಿಗೆ ಸಾವು ಕಣ್ಣಮುಂದೆಯೇ ಕಂಡಿತ್ತು.
ಹಿಂದಿರುಗಿ ನೋಡಿದಾಗ 100 ಅಡಿ ಎತ್ತರದ ಬೃಹತ್ ಕ್ರೇನ್ ನೇರವಾಗಿ ತಮ್ಮತ್ತಲೇ ಬೀಳುತ್ತಿರುವುದನ್ನು ಕಾಜಲ್ ಕಂಡರು. ಆ ಕ್ಷಣದಲ್ಲಿ ಅವರಿಗೆ ಏನು ಮಾಡಬೇಕೆಂದೇ ತೋಚದೆ ದಿಗ್ಭ್ರಮೆಯಾಗಿ ನಿಂತಿದ್ದರು. ಆಗ ಯಾರೋ ಕೈ ಹಿಡಿದು ತಮ್ಮನ್ನು ಪಕ್ಕಕ್ಕೆ ಎಳೆದಂತೆ ಅವರಿಗೆ ಭಾಸವಾಯಿತು. ಕ್ರೇನ್ ಅವರ ಪಕ್ಕದಲ್ಲೇ ಬಿದ್ದಿದ್ದು ಕಾಜಲ್ ಅಕ್ಷರಶಃ ನಡುಗಿ ಹೋಗಿದ್ದರು. ಆ ಘಟನೆಯ ನಂತರ ತಾವು ಶ್ರೀಕೃಷ್ಣನ ಪರಮ ಭಕ್ತೆಯಾದೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ದುರಂತದಲ್ಲಿ ಚಿತ್ರತಂಡದ ಕೃಷ್ಣ, ಚಂದ್ರನ್ ಮತ್ತು ಮಧು ಎಂಬ ಮೂವರು ಪ್ರಾಣ ಕಳೆದುಕೊಂಡಿದ್ದರು. ನಟ ಕಮಲ್ ಹಾಸನ್ ಕೂಡ ಕೆಲವೇ ಮೀಟರ್ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. ಘಟನೆಯ ಕೆಲ ತಿಂಗಳ ಬಳಿಕ ನಿರ್ದೇಶಕ ಶಂಕರ್, ಕಮಲ್ ಹಾಸನ್ ಮತ್ತು ಲೈಕಾ ಪ್ರೊಡಕ್ಷನ್ಸ್ ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಿದ್ದರು. ಗಾಯಾಳುಗಳ ಚಿಕಿತ್ಸೆಗೂ ಚಿತ್ರತಂಡ ನೆರವಾಗಿತ್ತು.
ಇದನ್ನೂ ಓದಿ: ‘ರಾಮಾಯಣ’ದಲ್ಲಿ ಕಾಜಲ್ ಅಗರ್ವಾಲ್ ಪಾತ್ರದ ಮೇಕಪ್ ವಸ್ತ್ರಾಲಂಕಾರ ನೋಡಿ: ವಿಡಿಯೋ
ಕೊರೊನಾ ಲಾಕ್‌ಡೌನ್‌ಗೂ ಮುನ್ನ ನಡೆದ ಈ ಘಟನೆ ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಆ ಕರಾಳ ದಿನವನ್ನು ನೆನೆದರೆ ಈಗಲೂ ಮೈ ಜುಮ್ ಎನ್ನುತ್ತದೆ ಎಂದು ಕಾಜಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾನು ಇನ್ನೂ ಹೇಗೆ ಬದುಕಿದ್ದೇನೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು ಎಂದಿದ್ದಾರೆ. ಅಂದಹಾಗೆ ಹಲವು ವಿಘ್ನಗಳ ಬಳಿಕ 2024ರಲ್ಲಿ ತೆರೆಕಂಡ ‘ಇಂಡಿಯನ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋಲು ಕಂಡಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.