‘ಕಾಲಾ ಹಿರಣ್’ ವಿವಾದ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ‘ಕಾಲಾ ಹಿರಣ್’ ಸಿನಿಮಾ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಈ ವಿವಾದ ತೀವ್ರಗೊಂಡಿದೆ. ಈ ಚಿತ್ರದ ಟೀಸರ್ ಡಿಲೀಟ್ ಮಾಡಬೇಕು ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ನಿರ್ಮಾಪಕರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

‘ಕಾಲಾ ಹಿರಣ್’ ವಿವಾದ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ
Kala Hiran Movie Poster

Updated on: Aug 19, 2026 | 8:48 PM

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣದಿಂದ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran: The Battle for Legacy) ಸಿನಿಮಾದ ಟೀಸರ್ ಹಾಗೂ ಪ್ರಚಾರದ ಇತರೆ ಕಂಟೆಂಟ್​ಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ನಿರ್ಮಾಪಕರು ಇದೀಗ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ‘ಜಾನಿ ಫೈರ್‌ಫಾಕ್ಸ್ ಫಿಲ್ಮ್ಸ್’ ಸಂಸ್ಥೆಯ ನಿರ್ಮಾಪಕ ಅಮಿತ್ ಜಾನಿ ಅವರು ದೆಹಲಿ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಚಿತ್ರತಂಡ ಜುಲೈ 17ರಂದು ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಸಲ್ಮಾನ್ ಖಾನ್ ನ್ಯಾಯಾಲಯದ ಮೊರೆ ಹೋಗಿದ್ದರು. ಜುಲೈ 27ರಂದು ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ಸಲ್ಮಾನ್ ಖಾನ್ ಅವರ ಗೌರವಕ್ಕೆ ಈ ಟೀಸರ್ ಧಕ್ಕೆ ತರುತ್ತಿದೆ ಹಾಗೂ ಅವರ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿ ಟೀಸರ್ ಅನ್ನು ತಕ್ಷಣವೇ ಡಿಜಿಟಲ್ ವೇದಿಕೆಗಳಿಂದ ತೆರವುಗೊಳಿಸುವಂತೆ ಸೂಚಿಸಿತ್ತು.

ನಿರ್ಮಾಪಕರ ವಾದ ಏನು?

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ನಿರ್ಮಾಪಕ ಅಮಿತ್ ಜಾನಿ ಅವರು ಈ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ‘ಸಲ್ಮಾನ್ ಖಾನ್ ಅವರು ವ್ಯಕ್ತಿತ್ವದ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡು ಕಲಾತ್ಮಕ ಅಭಿವ್ಯಕ್ತಿ ಮತ್ತು ಸ್ವತಂತ್ರ ಚಿತ್ರನಿರ್ಮಾಣವನ್ನು ತಡೆಯುವುದು ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆಯಾಗುತ್ತದೆ. ಸಾರ್ವಜನಿಕ ವಲಯದಲ್ಲಿರುವ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವುದನ್ನು ತಡೆಯಲು ವ್ಯಕ್ತಿತ್ವ ಹಕ್ಕುಗಳನ್ನು ಅಸ್ತ್ರವಾಗಿ ಬಳಸಬಾರದು’ ಎಂದು ವಾದಿಸಿದ್ದಾರೆ.

ಸಲ್ಮಾನ್ ಖಾನ್ ಆರೋಪವೇನು?

ಸಲ್ಮಾನ್ ಖಾನ್ ಪರ ವಕೀಲರು ನ್ಯಾಯಾಲಯಕ್ಕೆ ನೀಡಿರುವ ಅರ್ಜಿಯಲ್ಲಿ, ‘ಎರಡು ನಿಮಿಷಗಳ ಟೀಸರ್‌ನಲ್ಲಿ ಅಯಾನ್ ಖಾನ್ ಎಂಬ ಕಾಲ್ಪನಿಕ ಸೂಪರ್‌ಸ್ಟಾರ್ ಪಾತ್ರವನ್ನು ಸೃಷ್ಟಿಸಿ ತಮ್ಮನ್ನು ಬಿಂಬಿಸಲಾಗಿದೆ. ಅಲ್ಲದೆ, ತಮ್ಮ ಸೂಪರ್‌ಹಿಟ್ ಸಿನಿಮಾಗಳಾದ ದಬಂಗ್ ಹಾಗೂ ಸಿಕಂದರ್ ಚಿತ್ರಗಳ ಉಲ್ಲೇಖಗಳನ್ನು ಬಳಸಿಕೊಳ್ಳಲಾಗಿದೆ’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಸಂಭಾವನೆಯಲ್ಲಿ ಭಾರಿ ಇಳಿಕೆ; 120 ಕೋಟಿ ರೂಪಾಯಿ ಬದಲು 70 ಕೋಟಿ ರೂ.?

ಕೋರ್ಟ್‌ರೂಮ್ ಡ್ರಾಮಾ ಶೈಲಿಯಲ್ಲಿರುವ ಈ ಟೀಸರ್‌ನಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆ, ಸಾಕ್ಷಿಗಳ ತನಿಖೆ ಹಾಗೂ ಬೆದರಿಕೆಗಳ ಸನ್ನಿವೇಶಗಳನ್ನು ಪ್ರದರ್ಶಿಸಲಾಗಿದ್ದು, ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ವ್ಯಕ್ತಿತ್ವವನ್ನು ವ್ಯಾಪಾರದ ಉದ್ದೇಶದಿಂದ ಬಳಸಿಕೊಳ್ಳಲಾಗಿದೆ ಎಂದು ಸಲ್ಮಾನ್ ಖಾನ್ ದೂರಿನಲ್ಲಿ ತಿಳಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಯಾವ ರೀತಿಯ ತೀರ್ಪು ನೀಡಲಿದೆ ಎಂಬುದು ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us