
ನಟ ಕಮಲ್ ಹಾಸನ್ (Kamal Haasan) ನಟನೆಯ ‘ಪುಷ್ಪಕ ವಿಮಾನ’ ಹೊಸ ದಾಖಲೆ ಬರೆದಿತ್ತು. 1987ರಲ್ಲಿ ಮೂಡಿ ಬಂದ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಗೆದ್ದಿತ್ತು. ಈ ಸಿನಿಮಾ ಮಾಡಿದ ದಾಖಲೆಗಳು ಹಲವು. ‘ಪುಷ್ಪಕ ವಿಮಾನ’ ಸಿನಿಮಾ (Pushpaka Vimana Movie) ಮೂಕಿ ಚಿತ್ರ. ಇಡೀ ಚಿತ್ರದಲ್ಲಿ ಒಂದೇ ಒಂದು ಮಾತು ಕೂಡ ಇರಲಿಲ್ಲ. ಈ ಸಿನಿಮಾ ತೆರೆಗೆ ಬಂದು ನವೆಂಬರ್ 27ಕ್ಕೆ 35 ವರ್ಷಗಳು ಕಳೆದಿವೆ. ಇದನ್ನು ಕಮಲ್ ಹಾಸನ್ ನೆನಪಿಸಿಕೊಂಡಿದ್ದಾರೆ. ಅವರ ವೃತ್ತಿ ಬದುಕನ್ನು ಮತ್ತೊಂದು ಎತ್ತರಕ್ಕೆ ಕರೆದುಕೊಂಡ ಹೋದ ಖ್ಯಾತಿ ಈ ಚಿತ್ರಕ್ಕೆ ಸಿಗುತ್ತದೆ.
ಹಲವು ಕಲಾವಿದರು ಚಾಲೆಂಜಿಂಗ್ ಪಾತ್ರಗಳನ್ನು ಮಾಡಲು ಇಷ್ಟಪಡುತ್ತಾರೆ. ಕಮಲ್ ಹಾಸನ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ವೃತ್ತಿ ಜೀವನದಲ್ಲಿ ಹಲವು ಚಾಲೆಂಜಿಂಗ್ ಪಾತ್ರಗಳನ್ನು ಮಾಡಿ ತೋರಿಸಿದ್ದಾರೆ. ಆ ಪೈಕಿ ‘ಪುಷ್ಪಕ ವಿಮಾನ’ ಚಿತ್ರ ಕೂಡ ಒಂದು. ಈ ಸಿನಿಮಾ 1987ರ ನವೆಂಬರ್ 27ರಂದು ರಿಲೀಸ್ ಆಯಿತು. 35 ಲಕ್ಷ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ 1 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಈ ಸಿನಿಮಾ ಕನ್ನಡದಲ್ಲಿ ‘ಪುಷ್ಪಕ ವಿಮಾನ’ ಹೆಸರಿನಲ್ಲಿ ರಿಲೀಸ್ ಆಯಿತು. ಉತ್ತರ ಭಾರತದಲ್ಲಿ ‘ಪುಷ್ಪಕ್’ ಹೆಸರಿನಲ್ಲಿ ಚಿತ್ರ ಬಿಡುಗಡೆ ಕಂಡಿತ್ತು. ಅಲ್ಲಿಯೂ ಸಿನಿಮಾ ಮೆಚ್ಚುಗೆ ಪಡೆದಿದೆ. ಅಮಲಾ ಅಕ್ಕಿನೇನಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಕಮಲ್ ಹಾಸನ್ ಅವರು ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡಿದ ಸಿಂಗೀತಂ ಶ್ರೀನಿವಾಸ ರಾವ್ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಸದ್ಯಕ್ಕಂತೂ ಸೆಟ್ಟೇರಲ್ಲ ಯಶ್-ಶಂಕರ್ ಸಿನಿಮಾ; ಕಮಲ್ ಹಾಸನ್ ಟ್ವೀಟ್ನಲ್ಲೇ ಅಡಗಿದೆ ಉತ್ತರ
ಕಮಲ್ ಹಾಸನ್ ಅವರು ಇತ್ತೀಚೆಗೆ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಸಾಮಾನ್ಯ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ತೆರಳಿದ್ದರು ಎನ್ನಲಾಗಿದೆ. ನಂತರ ಒಂದೇ ದಿನದಲ್ಲಿ ಅವರು ಆಸ್ಪತ್ರೆಯಿಂದ ಮರಳಿದ್ದರು. ‘ಇಂಡಿಯನ್ 2’ ಸಿನಿಮಾ ಕೆಲಸಗಳಲ್ಲಿ ಕಮಲ್ ಹಾಸನ್ ಬ್ಯುಸಿ ಆಗಿದ್ದಾರೆ. ಶಂಕರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ತೆರೆಗೆ ಬಂದಿದ್ದ ‘ಇಂಡಿಯನ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಲವು ವರ್ಷಗಳ ಬಳಿಕ ‘ಇಂಡಿಯನ್ 2’ ಸಿನಿಮಾ ಸಿದ್ಧಗೊಳ್ಳುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ