ಹೃದಯದಲ್ಲಿ ನೋವಿದೆ: ಪಂಜಾಬಿಗರ ವಿರೋಧದ ಬಗ್ಗೆ ಕಂಗನಾ ಮಾತು

|

Updated on: Jan 20, 2025 | 7:28 PM

Kangana Ranaut: ನಟಿ, ಸಂಸದೆ ಕಂಗನಾ ರನೌತ್ ನಟಿಸಿ, ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರುವ ಇಂದಿರಾ ಗಾಂಧಿ ಜೀವನ ಆಧರಿಸಿದ ‘ಎಮರ್ಜೆನ್ಸಿ’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಪಂಜಾಬಿಗಳು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದ್ದು, ಇದೀಗ ಸಿನಿಮಾ ಪಂಜಾಬ್​ನಲ್ಲಿ ಬಿಡುಗಡೆ ಆಗದಂತೆ ತಡೆಯಲಾಗಿದೆ. ಈ ಬಗ್ಗೆ ಕಂಗನಾ ರನೌತ್ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

ಹೃದಯದಲ್ಲಿ ನೋವಿದೆ: ಪಂಜಾಬಿಗರ ವಿರೋಧದ ಬಗ್ಗೆ ಕಂಗನಾ ಮಾತು
Kangana Ranaut1
Follow us on

ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ನಿರ್ದೇಶಿಸಿ, ನಿರ್ಮಾಣವೂ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಹಲವು ಅಡೆ ತಡೆಗಳ ಬಳಿಕ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಆದರೆ ಕಂಗನಾರ ಸಿನಿಮಾ ಬಿಡುಗಡೆಗೆ ಪಂಜಾಬ್​ನಲ್ಲಿ ಹಾಗೂ ಇನ್ನೂ ಕೆಲವು ಕಡೆ ವಿರೋಧ ವ್ಯಕ್ತವಾಗಿದೆ. ಪಂಜಾಬ್​ನಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ಅವಕಾಶವನ್ನೇ ನೀಡಲಾಗಿಲ್ಲ. ಇದರಿಂದ ಸಿನಿಮಾಕ್ಕೆ ಭಾರಿ ದೊಡ್ಡ ಹೊಡೆತ ಬಿದ್ದಿದೆ. ಇದೀಗ ಈ ವಿಷಯವಾಗಿ ನಟಿ ಕಂಗನಾ ರನೌತ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

‘ನನ್ನ ಸಿನಿಮಾಕ್ಕೆ ಎಲ್ಲರೂ ಪ್ರೀತಿ ವ್ಯಕ್ತಪಡಿಸುತ್ತಿರುವುದರಿಂದ ನನ್ನ ಹೃದಯ ತುಂಬಿ ಬಂದಿದೆ. ಆದರೆ ನನ್ನ ಹೃದಯದಲ್ಲಿ ಇನ್ನೂ ನೋವಿದೆ. ಒಂದು ಸಮಯವಿತ್ತು, ನನ್ನ ಸಿನಿಮಾಗಳು ಪಂಜಾಬ್​ನಲ್ಲಿ ಅತಿ ಹೆಚ್ಚು ಪ್ರದರ್ಶನ ಕಾಣುತ್ತಿದ್ದವು. ಆದರೆ ಈಗ ಪಂಜಾಬ್​ನಲ್ಲಿ ನನ್ನ ಸಿನಿಮಾ (ಎಮರ್ಜೆನ್ಸಿ) ಬಿಡುಗಡೆಯನ್ನೇ ಮಾಡಲಾಗುತ್ತಿಲ್ಲ. ಕೆನಡಾ, ಬ್ರಿಟನ್ ಮತ್ತು ಇತರೆ ಕೆಲವು ಕಡೆ ನನ್ನ ಸಿನಿಮಾದ ಮೇಲೆ ದಾಳಿಗಳನ್ನು ಮಾಡಲಾಗುತ್ತಿದೆ. ಸಿನಿಮಾ ತಂಡದ ಮೇಲೆ ದಾಳಿಗಳನ್ನು ಮಾಡಲಾಗಿದೆ’ ಎಂದಿದ್ದಾರೆ ಕಂಗನಾ ರನೌತ್.

‘ಕೆಲವು ಸಣ್ಣ ಜನರು, ಬೆರಳೆಣಿಕೆಯಷ್ಟು ಜನರು ಈ ಬೆಂಕಿಯನ್ನು ಹಾಕಿದ್ದಾರೆ. ಈ ಬೆಂಕಿಯಲ್ಲಿ ನಾವು ನೀವು ಸುಡುತ್ತಿದ್ದೇವೆ. ನನ್ನ ವಿಚಾರ, ನನ್ನ ಸಿನಿಮಾ, ನನ್ನ ದೇಶದ ಪರವಾಗಿ ನನಗೆ ಇರುವ ವಿಚಾರಗಳು ಈ ಸಿನಿಮಾದಿಂದ ವ್ಯಕ್ತವಾಗುತ್ತಿವೆ. ಸಿನಿಮಾ ನೋಡಿ ನೀವೇ ನಿರ್ಣಯ ಮಾಡಿ ಈ ಸಿನಿಮಾ ನಮ್ಮನ್ನು ಜೋಡಿಸುವ ಸಂದೇಶ ಹೊಂದಿದೆಯೇ ಅಥವಾ ಬೇರ್ಪಡಿಸುವ ಸಂದೇಶ ಹೊಂದಿದೆಯೇ ಎಂಬುದನ್ನು ನೀವೇ ನಿರ್ಣಯಿಸಿ’ ಎಂದಿದ್ದಾರೆ ಕಂಗನಾ ರನೌತ್.

ಇದನ್ನೂ ಓದಿ:ಕಲೆಕ್ಷನ್ ವಿಚಾರದಲ್ಲಿ ತೆವಳಿಕೊಂಡು ಸಾಗುತ್ತಿದೆ ‘ಎಮರ್ಜೆನ್ಸಿ’ ಸಿನಿಮಾ

ಕಂಗನಾ ವಿರುದ್ಧ ಪಂಜಾಬಿಗಳು ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ರೈತ ಹೋರಾಟ ನಡೆದಾಗ ಕಂಗನಾ ರನೌತ್ ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಸರಣಿ ಟ್ವೀಟ್​ಗಳನ್ನು ಮಾಡಿದ್ದರು. ಆ ಸಮಯದಲ್ಲಿ ಪ್ರತಿಭಟನಾ ನಿರತ ರೈತರ ಬಗ್ಗೆ ಅವಹೇಳನಕಾರಿ ಟ್ವೀಟ್​ಗಳನ್ನು ಸಹ ಮಾಡಿದ್ದರು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಆ ಪ್ರತಿಭಟನೆಯಲ್ಲಿ ಇದ್ದಿದ್ದು ಬಹುತೇಕ ಪಂಜಾಬಿಗಳೆ. ಅಲ್ಲದೆ ಈಗ ಕಂಗನಾ ಮಾಡಿರುವ ಸಿನಿಮಾ ‘ಎಮರ್ಜೆನ್ಸಿ’ ಇಂದಿರಾ ಗಾಂಧಿಯ ಕುರಿತಾದ ಸಿನಿಮಾ. ಇಂದಿರಾ ಗಾಂಧಿಯನ್ನು ಕೊಂದ ವ್ಯಕ್ತಿಗಳು ಪಂಜಾಬಿಗಳಾಗಿದ್ದರು. ಹಾಗಾಗಿ ಸಿನಿಮಾದಲ್ಲಿ ಅವರನ್ನು ವಿಲನ್​ಗಳ ರೀತಿಯಲ್ಲಿ ತೋರಿಸಲಾಗಿದೆ ಎಂಬುದು ಸಹ ಪಂಜಾಬಿಗಳು ‘ಎಮರ್ಜೆನ್ಸಿ’ ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ