ಬಾಲಿವುಡ್ ಕಲಾವಿದರಾದ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಕೇಳಿಬರುತ್ತಲೇ ಇದೆ. ಈಗ ಈ ಜೋಡಿ ತಮ್ಮ ರಿಲೇಷನ್ಶಿಪ್ ಅನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ. ಶೀಘ್ರದಲ್ಲೇ ಈ ಸ್ಟಾರ್ ಕಪಲ್ ಮದುವೆ (Katrina Kaif – Vicky Kaushal Marriage) ನಡೆಯಲಿದೆ. ಇದೇ ವರ್ಷ ಡಿಸೆಂಬರ್ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಹಸೆಮಣೆ ಏರುವುದು ಖಚಿತ ಎಂಬ ಮಾಹಿತಿ ಹರಿದಾಡುತ್ತಿದೆ. ಆ ಬಗ್ಗೆ ಇವರಿಬ್ಬರು ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಆದರೆ ಬಲ್ಲ ಮೂಲಗಳಿಂದ ಬಿಸಿಬಿಸಿ ಸುದ್ದಿ ಕೇಳಿಬಂದಿದೆ. ರಾಜಸ್ಥಾನದಲ್ಲಿ ಈ ಸೆಲೆಬ್ರಿಟಿ ವಿವಾಹ ನಡೆಯಲಿದೆ. ಅಚ್ಚರಿ ಎಂದರೆ ಮದುವೆ ಬಳಿಕ ಹನಿಮೂನ್ಗೆ (Honeymoon) ಹೋಗಬಾರದು ಎಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣವೂ ಇದೆ.
ಈಗಾಗಲೇ ರಾಜಸ್ಥಾನದಲ್ಲಿ ಮದುವೆ ತಯಾರಿ ನಡೆಯುತ್ತಿದೆ. ಹಾಗಿದ್ದರೂ ಕೂಡ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕುಟುಂಬದವರು ಗುಟ್ಟು ಬಿಟ್ಟು ಕೊಡುತ್ತಿಲ್ಲ. ಮದುವೆಗಾಗಿ ಕತ್ರಿನಾ ಹಾಗೂ ವಿಕ್ಕಿ 30 ದಿನಗಳ ಕಾಲ ರಜೆ ಪಡೆಯಲಿದ್ದಾರೆ. ಸದ್ಯ ಅವರು ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕಲಿದ್ದಾರೆ. ಒಪ್ಪಿಕೊಂಡಿರುವ ಕೆಲವು ಚಿತ್ರಗಳ ಕೆಲಸಗಳನ್ನು ಮುಂದೂಡಿದ್ದಾರೆ. ಒಂದೆರಡು ಜಾಹೀರಾತಿನ ಶೂಟಿಂಗ್ನಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ.
ಮದುವೆ ಬಳಿಕ ಹನಿಮೂನ್ಗೆ ತೆರಳಿದರೆ ಕನಿಷ್ಠ ಒಂದು ತಿಂಗಳು ಕಳೆಯುತ್ತದೆ. ಅದರಿಂದ ಈ ಮೊದಲೇ ಒಪ್ಪಿಕೊಂಡ ಸಿನಿಮಾ ಕೆಲಸಗಳಿಗೆ ತೊಂದರೆ ಆಗಲಿದೆ. ಹಾಗಾಗಿ ಹನಿಮೂನ್ಗೆ ತೆರಳದಿರಲು ಈ ಜೋಡಿ ನಿರ್ಧರಿಸಿದೆ ಎಂಬ ಮಾತು ಕೇಳಿಬಂದಿದೆ. ವಿಕ್ಕಿ ಕೌಶಲ್ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಟೈಗರ್ 3’, ‘ಫೋನ್ ಭೂತ್’ ಮುಂತಾದ ಚಿತ್ರಗಳಲ್ಲಿ ಕತ್ರಿನಾ ನಟಿಸುತ್ತಿದ್ದಾರೆ. ಆ ಚಿತ್ರಗಳ ಕೆಲಸಕ್ಕೆ ತೊಂದರೆ ಆಗಬಾರದು ಎಂದು ಅವರು ಹನಿಮೂನ್ ಪ್ಲ್ಯಾನ್ ಕೈ ಬಿಟ್ಟಿದ್ದಾರೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ರೀತಿಯೇ ಬಾಲಿವುಡ್ನಲ್ಲಿ ಇನ್ನೊಂದು ಸ್ಟಾರ್ ಜೋಡಿ ಎನಿಸಿಕೊಂಡಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಸಹ ಶೀಘ್ರವೇ ಮದುವೆ ಆಗುತ್ತಾರೆ ಎಂಬ ಸುದ್ದಿ ಜೋರಾಗಿ ಹಬ್ಬಿದೆ. ಅವರು ಕೂಡ ಡಿಸೆಂಬರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಸಿನಿಮಾ ಕೆಲಸಗಳು ಹೆಚ್ಚಿರುವುದರಿಂದ 2022ರ ಏಪ್ರಿಲ್ಗೆ ಮದುವೆ ದಿನಾಂಕ ಮುಂದೂಡಲಾಗಿದೆ ಎಂಬ ಮಾಹಿತಿ ಈಗ ಕೇಳಿಬಂದಿದೆ.
ಇದನ್ನೂ ಓದಿ:
2 ಬಾರಿ ಅಕ್ಷಯ್ ಕುಮಾರ್ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?