ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ‘ಶೇರ್ಷಾ’ ಸಿನಿಮಾಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೇಶಭಕ್ತಿ ಪ್ರಧಾನವುಳ್ಳ ಈ ಚಿತ್ರ ಆಗಸ್ಟ್ 12ರಂದು ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಕ್ಲೈಮ್ಯಾಕ್ ನೋಡಿ ಚಿತ್ರದ ನಾಯಕಿ ಕಿಯಾರಾ ಅತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಕ್ಯಾಪ್ಟನ್ ವಿಕ್ರಮ್ ಬತ್ರಾ ಜೀವನ ಆಧರಿಸಿ ‘ಶೇರ್ಷಾ’ ಸಿದ್ಧಗೊಂಡಿದೆ. ಇದು ನೈಜ ಘಟನೆ ಆಧರಿಸಿ ಸಿದ್ಧಗೊಂಡಿರುವ ಸಿನಿಮಾ. ಹೀಗಾಗಿ, ನಿರ್ದೇಶಕರು ಸಾಕಷ್ಟು ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ನೋಡಿದ ಅನೇಕರಿಗೆ ಕಣ್ಣಲ್ಲಿ ನೀರು ಬಂದಿದೆ. ಇದಕ್ಕೆ ಕಿಯಾರಾ ಕೂಡ ಹೊರತಾಗಿಲ್ಲ.
ಕಿಯಾರಾ ವಿಮಾನದಲ್ಲಿ ಸಾಗುವಾಗ ‘ಶೇರ್ಷಾ’ ಸಿನಿಮಾ ನೋಡಿದ್ದಾರೆ ಎನ್ನಲಾಗಿದೆ. ವಿಡಿಯೋ ನೋಡುತ್ತಿದ್ದಂತೆಯೇ ಅವರ ಕಣ್ಣು ಒದ್ದೆಯಾಗಿದೆ. ಇದನ್ನು ಕಿಯಾರಾ ಫ್ಯಾನ್ಪೇಜ್ಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿವೆ.
ಡಿಂಪಲ್ ಚೀಮಾ ಪಾತ್ರವನ್ನು ಕಿಯಾರಾ ಮಾಡಿದ್ದಾರೆ. ಕ್ಯಾಪ್ಟನ್ ವಿಕ್ರಮ್ ಅವರನ್ನು ಪ್ರೀತಿಸುವ ಡಿಂಪಲ್ ನಂತರ ಅವರನ್ನೇ ವರಿಸಬೇಕು ಎನ್ನುವ ಕನಸ ಕಂಡಿರುತ್ತಾರೆ. ಆದರೆ, ಅದು ಸಾಧ್ಯವಾಗುವುದೇ ಇಲ್ಲ. ಇಂದಿಗೂ ಡಿಂಪಲ್ ಮದುವೆ ಆಗದೆ ಉಳಿದುಕೊಂಡಿದ್ದಾರೆ ಅನ್ನೋದು ವಿಶೇಷ. ಸದ್ಯ ಡಿಂಪಲ್ ಚಂಡೀಗಢದ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ರಿಲೇಶನ್ಶಿಪ್ನಲ್ಲಿದ್ದಾರೆ ಎನ್ನುವ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಈ ವದಂತಿಯನ್ನು ನಂಬುವ ರೀತಿಯಲ್ಲಿ ಸಾಕಷ್ಟು ಘಟನೆಗಳು ನಡೆದವು. ಹೀಗಾಗಿ, ಅಭಿಮಾನಿಗಳು ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಭಾವಿಸಿದ್ದರು. ಇದಕ್ಕೆ ಕಿಯಾರಾ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ಸಂದರ್ಶನವೊಂದರಲ್ಲಿ ಅವರಿಗೆ ಈ ವಿಚಾರದ ಬಗ್ಗೆ ಮತ್ತೆ ಪ್ರಶ್ನಿಸಲಾಯಿತು. ಇದಕ್ಕೆ ಕಿಯಾರಾ ಉತ್ತರ ನೀಡಿದ್ದಾರೆ. ನಾವಿಬ್ಬರೂ ಉತ್ತಮ ಗೆಳೆಯರಷ್ಟೇ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಜತೆ ಲವ್ವಿಡವ್ವಿ? ಎಲ್ಲವನ್ನೂ ಹೇಳಿಕೊಂಡ ನಟಿ ಕಿಯಾರಾ