ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಬಾಲಿವುಡ್ನಲ್ಲಿ ಅವರು ಕೆಲವರನ್ನು ಎದುರು ಹಾಕಿಕೊಂಡಿದ್ದಾರೆ. ಸಿದ್ಧಾಂತದ ಕಾರಣದಿಂದ ಒಂದು ವರ್ಗದ ನೆಟ್ಟಿಗರು ಅವರನ್ನು ವಿರೋಧಿಸುತ್ತಾರೆ. ಬಲಪಂಥೀಯ ವಿಚಾರಗಳನ್ನು ಅವರು ಹೆಚ್ಚು ಪ್ರತಿಪಾದಿಸುತ್ತಾರೆ ಎಂಬುದು ಹಲವರು ಅಭಿಪ್ರಾಯ. ಇದರ ನಡುವೆ ಕಾಂಟ್ರವರ್ಸಿ ನಿರ್ದೇಶಕ ಕಮ್ ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್. ಖಾನ್ ಅವರು ಹೊಸ ಹೇಳಿಕೆ ನೀಡಿದ್ದಾರೆ. ಶಾರುಖ್ ಖಾನ್ ಅಭಿನಯದ ‘ಪಠಾಣ್’ (Pathaan Movie) ಚಿತ್ರದ ವಿವಾದದಿಂದ ವಿವೇಕ್ ಅಗ್ನಿಹೋತ್ರಿ ಅವರು ಪ್ರಚಾರ ಪಡೆಯುತ್ತಿದ್ದಾರೆ ಎಂದು ಕಮಾಲ್ ಆರ್. ಖಾನ್ (Kamaal R Khan) ಆರೋಪಿಸಿದ್ದಾರೆ. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರ ಜನಪ್ರಿಯತೆ ಹೆಚ್ಚಿತು. ಈಗ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಶುರುವಾಗಿದೆ. ಆ ಸಿನಿಮಾದ ಕೆಲಸಗಳ ಜೊತೆಗೆ ಕೆಲವು ವಿವಾದಗಳ ಬಗ್ಗೆಯೂ ತಮ್ಮ ಅನಿಸಿಕೆ ಹಂಚಿಕೊಳ್ಳಲು ವಿವೇಕ್ ಅಗ್ನಿಹೋತ್ರಿ ಸಮಯ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: KRK: ಲೈಂಗಿಕ ಕಿರುಕುಳ ಆರೋಪದಲ್ಲಿ ಕಮಾಲ್ ಆರ್. ಖಾನ್ ಅರೆಸ್ಟ್; ಒಂದೇ ವಾರದಲ್ಲಿ ಡಬಲ್ ಸಂಕಟ
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ‘ಬೇಷರಂ ರಂಗ್..’ ಹಾಡು ಅಶ್ಲೀಲವಾಗಿದೆ ಎಂದು ಕೆಲವರು ಆಕ್ಷೇಪ ಎತ್ತಿದ್ದಾರೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ವಿವೇಕ್ ಅಗ್ನಿಹೋತ್ರಿ ಕೂಡ ಟ್ವೀಟ್ ಮಾಡಿದ್ದರು. ಹಾಗಾಗಿ ಅವರ ವಿರುದ್ಧ ಶಾರುಖ್ ಖಾನ್ ಫ್ಯಾನ್ಸ್ ಗರಂ ಆಗಿದ್ದಾರೆ. ಕೆಲವರಂತೂ ಜೀವ ಬೆದರಿಕೆ ಹಾಕಿದ್ದಾರೆ ಮತ್ತು ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾರೆ. ಅವರ ಸ್ಕ್ರೀನ್ ಶಾಟ್ಗಳನ್ನು ವಿವೇಕ್ ಅಗ್ನಿಹೋತ್ರಿ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅದರ ಕುರಿತು ಈಗ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.
My friend @vivekagnihotri is trying to get publicity out of #Pathaan Controversy. So he is sharing DM of some Nalla people. Many people are threatening me everyday but I won’t do that. And why #Vivek does allow people to send him DM?
— KRK (@kamaalrkhan) January 2, 2023
‘ನನ್ನ ಸ್ನೇಹಿತ ವಿವೇಕ್ ಅಗ್ನಿಹೋತ್ರಿ ಅವರು ಪಠಾಣ್ ಚಿತ್ರದ ವಿವಾದದಿಂದ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕೆಲವರ ಮೆಸೇಜ್ಗಳನ್ನು ಅವರು ಶೇರ್ ಮಾಡುತ್ತಿದ್ದಾರೆ. ನನಗೂ ಪ್ರತಿದಿನ ಬೆದರಿಕೆ ಸಂದೇಶಗಳು ಬರುತ್ತವೆ. ಆದರೆ ನಾನು ಅದನ್ನು ಶೇರ್ ಮಾಡಲ್ಲ. ಟ್ವಿಟರ್ನಲ್ಲಿ ಮೆಸೇಜ್ ಮಾಡಲು ವಿವೇಕ್ ಯಾಕೆ ಅವಕಾಶ ನೀಡಬೇಕು’ ಎಂದು ಕಮಾಲ್ ಆರ್. ಖಾನ್ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:26 pm, Tue, 3 January 23