
ನಟ ಶಾರುಖ್ ಖಾನ್ ಅವರು ಈಗ ಸಂಕಷ್ಟದಲ್ಲಿದ್ದಾರೆ. ಪುತ್ರ ಆರ್ಯನ್ ಖಾನ್ ಅರೆಸ್ಟ್ ಆದ ದಿನದಿಂದಲೂ ಅವರ ದಿನಚರಿ ಬದಲಾಗಿದೆ. ಯಾವುದೇ ಸಿನಿಮಾ ಶೂಟಿಂಗ್ನಲ್ಲಿ ಶಾರುಖ್ ಭಾಗಿ ಆಗುತ್ತಿಲ್ಲ. ಇದರಿಂದಾಗಿ ನಿರ್ಮಾಪಕರ ಲೆಕ್ಕಾಚಾರ ತಲೆಕೆಳಗಾಗುತ್ತಿದೆ. ಸಿನಿಮಾ ಮಾತ್ರವಲ್ಲದೇ ಹಲವು ಜಾಹೀರಾತುಗಳಲ್ಲೂ ಶಾರುಖ್ ನಟಿಸಬೇಕಿದೆ. ಅವುಗಳ ಶೂಟಿಂಗ್ ಕೂಡ ಸ್ಥಗಿತಗೊಂಡಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಅಜಯ್ ದೇವಗನ್ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ನಟ ಕಮಾಲ್ ಆರ್. ಖಾನ್ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.
ಎಲ್ಲರಿಗೂ ತಿಳಿದಿರುವಂತೆ ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಅವರು ಪಾನ್ ಮಸಾಲಾ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಈ ಜಾಹೀರಾತಿನ ಹೊಸ ಆವೃತ್ತಿಯ ಶೂಟಿಂಗ್ಗೆ ಶಾರುಖ್ ಚಕ್ಕರ್ ಹಾಕಿದ್ದಾರೆ. ಆದರೆ ಅಜಯ್ ದೇವಗನ್ ಆ ರೀತಿ ಮಾಡಿಲ್ಲ. ಅಲ್ಲದೇ, ತಮ್ಮ ಪಾಲಿನ ಶೂಟಿಂಗ್ ದಿನಾಂಕವನ್ನು ಮುಂದಕ್ಕೆ ಹಾಕಲು ಸಹ ಅವರು ಒಪ್ಪಿಕೊಂಡಿಲ್ಲವಂತೆ.
‘ಶಾರುಖ್ ಮಗನ ಸಮಸ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಅದು ಶಾರುಖ್ ಖಾನ್ ಅವರ ಪರ್ಸನಲ್ ಸಮಸ್ಯೆ. ಆ ಕಾರಣದಿಂದ ನಾನು ನನ್ನ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಬೇರೆ ಡೇಟ್ಸ್ ನೀಡಲು ಸಾಧ್ಯವಿಲ್ಲ’ ಎಂದು ನಿರ್ಮಾಪಕರಿಗೆ ಅಜಯ್ ದೇವಗನ್ ಖಡಕ್ ಆಗಿ ಹೇಳಿದ್ದಾರೆ ಅಂತ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಮಂದಿಯ ಒಗ್ಗಟ್ಟು ಹೀಗಿದೆ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.
ತಮ್ಮ ಬಗ್ಗೆ ಕೇಳಿಬಂದ ಈ ಸುದ್ದಿ ಬಗ್ಗೆ ಅಜಯ್ ದೇವಗನ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅನೇಕ ಕಲಾವಿದರು ಈ ಪರಿಸ್ಥಿತಿಯಲ್ಲಿ ಶಾರುಖ್ ಖಾನ್ ಪರವಾಗಿ ಮಾತನಾಡುತ್ತಿದ್ದಾರೆ. ಶೇಖರ್ ಸುಮನ್, ವಿಶಾಲ್ ದದ್ಲಾನಿ, ಹೃತಿಕ್ ರೋಷನ್, ಸ್ವರಾ ಭಾಸ್ಕರ್, ಹನ್ಸಲ್ ಮೆಹ್ತಾ, ಫರ್ಹಾ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಶಾರುಖ್ ಪರವಾಗಿ ನಿಂತಿದ್ದಾರೆ. ಯಾರು ಎಷ್ಟೇ ಬೆಂಬಲ ತೋರಿದರೂ ಶಾರುಖ್ ಪುತ್ರನಿಗೆ ಜಾಮೀನು ಸಿಗುವುದು ಮರೀಚಿಕೆ ಆಗಿದೆ. ವಿಶೇಷ ಎನ್ಡಿಪಿಎಸ್ ಕೋರ್ಟ್ನಲ್ಲಿ ಅವರ ಜಾಮೀನು ಅರ್ಜಿ ರಿಜೆಕ್ಟ್ ಆಗಿದೆ. ಹಾಗಾಗಿ ಆರ್ಯನ್ ಪರ ವಕೀಲರು ಜಾಮೀನಿಗಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:
ಇಲ್ಲೊಬ್ಬ ಬಡಪಾಯಿ, ನಕಲಿ ಶಾರುಖ್ ಖಾನ್ಗೆ ಮಕ್ಕಳ ಶಾಲೆ ಫೀಸ್ ಕಟ್ಟಲು ದುಡ್ಡಿಲ್ಲ; ಯಾರಿದು?
Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್ ಖಾನ್; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್ ಮಗನ ವರ್ತನೆ
Published On - 8:54 am, Thu, 21 October 21