ಯಶ್ (Yash) ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ (KGF Chapter 2) ಸೃಷ್ಟಿ ಮಾಡಿದ ದಾಖಲೆಗಳು ಒಂದೆರಡಲ್ಲ. ಈ ಚಿತ್ರ ಬಾಲಿವುಡ್ ಒಂದರಲ್ಲೇ 430 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಾಲಿವುಡ್ನಲ್ಲೇ ಸಿದ್ಧಗೊಂಡ ಚಿತ್ರಗಳೂ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಈ ಸಿನಿಮಾದಲ್ಲಿ ಹೀರೋಯಿಸಂ, ತಾಯಿ ಸೆಂಟಿಮೆಂಟ್ ತೋರಿಸಿದ ರೀತಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ಬಾಲಿವುಡ್ನ ಯಾವುದೇ ದೊಡ್ಡ ಬಜೆಟ್ ಸಿನಿಮಾ ತೆರೆಕಂಡರೂ ಅದನ್ನು ‘ಕೆಜಿಎಫ್ 2’ಗೆ ಹೋಲಿಕೆ ಮಾಡಲಾಗುತ್ತಿದೆ. ಇದು ಅನೇಕ ದೊಡ್ಡ ಚಿತ್ರಗಳಿಗೆ ಹಿನ್ನಡೆ ಆಗುತ್ತಿದೆ ಎನ್ನಲಾಗುತ್ತಿದೆ. ಆ ಸಾಲಿನಲ್ಲಿ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಕೂಡ ಇದೆ ಎನ್ನಲಾಗುತ್ತಿದೆ.
ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ‘ಲಾಲ್ ಸಿಂಗ್ ಚಡ್ಡಾ’. ಮೂಲ ಚಿತ್ರವನ್ನು ಬಹುತೇಕ ಯಥಾವತ್ತು ಇಡಲಾಗಿದೆ ಎಂಬುದು ಟ್ರೇಲರ್ನಲ್ಲಿ ಗಮನಕ್ಕೆ ಬಂದಿದೆ. ಈ ಚಿತ್ರದಲ್ಲಿ ಕೆಲ ಯುದ್ಧದ ದೃಶ್ಯಗಳು ಇರುತ್ತವೆಯಾದರೂ ಮಾಸ್ ಆ್ಯಕ್ಷನ್ ಇಲ್ಲ. ಈ ಕಾರಣಕ್ಕೆ ಬಾಲಿವುಡ್ ಮಂದಿ ಈ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೋ ಅಥವಾ ಇಲ್ಲವೋ ಎಂಬ ಭಯ ಆಮಿರ್ ಖಾನ್ಗೆ ಕಾಡುತ್ತಿದೆ ಎನ್ನಲಾಗುತ್ತಿದೆ.
ಈ ಮೊದಲು ‘ರಾಧೆ ಶ್ಯಾಮ್’ ಸಿನಿಮಾ ಹೀನಾಯ ಸೋಲು ಕಂಡಿತ್ತು. ಈ ಚಿತ್ರದಲ್ಲಿ ಯಾವುದೇ ಮಾಸ್ ಅಂಶ ಇರಲಿಲ್ಲ. ಸಿನಿಮಾ ಸೋಲಲು ಇದು ಪ್ರಮುಖ ಕಾರಣ ಎನ್ನಲಾಗಿತ್ತು. ಈಗ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ತಂಡದವರಿಗೂ ಇದೇ ಮಾದರಿಯ ಭಯ ಕಾಡುತ್ತಿದೆ ಎಂದು ವರದಿ ಆಗಿದೆ. ಈ ಕಾರಣಕ್ಕೆ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲು ತಂಡ ಪ್ಲ್ಯಾನ್ ರೂಪಿಸುತ್ತಿದೆ.
ಇದನ್ನೂ ಓದಿ: ರಾಜಮೌಳಿ, ಚಿರಂಜೀವಿಗೆ ‘ಲಾಲ್ ಸಿಂಗ್ ಚಡ್ಡಾ’ ಸ್ಪೆಷಲ್ ಶೋ; ಸ್ಟಾರ್ಗಳ ಪ್ರತಿಕ್ರಿಯೆ ನೋಡಿ ಕಣ್ಣೀರಿಟ್ಟ ಆಮಿರ್ ಖಾನ್
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ತೆರೆಗೆ ಬರೋಕೆ ಒಂದು ತಿಂಗಳು ಮಾತ್ರ ಬಾಕಿ ಇದೆ. ಆದಾಗ್ಯೂ ಸಿನಿಮಾಗೆ ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಸೃಷ್ಟಿ ಆಗಿಲ್ಲ. ಈ ಚಿತ್ರದ ರಿಲೀಸ್ ದಿನಾಂಕ ಪದೇ ಪದೇ ಮುಂದೂಡಲ್ಪಟ್ಟಿರುವುದೂ ಚಿತ್ರದ ಹೈಪ್ ಸೃಷ್ಟಿ ಕುಗ್ಗಲು ಕಾರಣ ಎನ್ನಲಾಗುತ್ತಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಚಿತ್ರದ ಟ್ರೇಲರ್ಅನ್ನು ಐಪಿಎಲ್ ಫಿನಾಲೆಯಲ್ಲಿ ರಿಲೀಸ್ ಮಾಡಲಾಯಿತು. ಇದು ಕೂಡ ಚಿತ್ರಕ್ಕೆ ಅಂದುಕೊಂಡ ಮಟ್ಟಿಗೆ ಸಹಕಾರಿ ಆಗಿಲ್ಲ.