
ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರು ರಾಮನಾಗಿ ನಟಿಸಲಿರುವ ‘ರಾಮಾಯಣ’ ಸಿನಿಮಾ (Ramayana Movie) ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಅಷ್ಟರಲ್ಲಾಗಲೇ ಶೂಟಿಂಗ್ ಆರಂಭ ಆಗಿದೆ. ಈ ಸಿನಿಮಾಗೆ ನಿತೇಶ್ ತಿವಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರ ಶೂಟಿಂಗ್ ಶುರುವಾಗಿದೆ. ಅದರಲ್ಲಿ ಕೆಲವು ಕಲಾವಿದರು ಭಾಗಿ ಆಗಿದ್ದಾರೆ. ಬೇಸರದ ವಿಷಯ ಏನೆಂದರೆ, ಚಿತ್ರೀಕರಣದ ಸೆಟ್ನಿಂದ ಕೆಲವು ಫೋಟೋಗಳು ವೈರಲ್ ಆಗಿವೆ. ನಟಿ ಲಾರಾ ದತ್ತ (Lara Dutta), ನಟ ಅರುಣ್ ಗೋವಿಲ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇಂಥ ಹೈ ಬಜೆಟ್ ಸಿನಿಮಾಗಳನ್ನು ಮಾಡುವಾಗ ಚಿತ್ರತಂಡದವರು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ರಾಮಾಯಣ ಸಿನಿಮಾ ತಂಡದವರು ಆರಂಭದಲ್ಲೇ ಎಡವಿದಂತಿದೆ. ಕೈಕೇಯಿ ಪಾತ್ರ ಮಾಡುತ್ತಿರು ಲಾರಾ ದತ್ತ ಅವರ ಫೋಟೋಗಳು ಶೂಟಿಂಗ್ ಸೆಟ್ನಿಂದ ಲೀಕ್ ಆಗಿವೆ. ಈ ಫೋಟೋಗಳನ್ನು ‘ಜೂಮ್’ ವಾಹಿನಿ ಪ್ರಕಟಿಸಿದೆ.
ನಟ ಅರುಣ್ ಗೋವಿಲ್ ಅವರು ರಾಮಾಯಣ ಆಧಾರಿತ ಸಿನಿಮಾದಲ್ಲಿ ದಶರಥನ ಪಾತ್ರ ಮಾಡಲಿದ್ದಾರೆ. ರಮಾನಂದ್ ಸಾಗರ್ ನಿರ್ದೇಶನ ಮಾಡಿದ್ದ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್ ಗೋವಿಲ್ ಅವರು ರಾಮನ ಪಾತ್ರ ಮಾಡಿ ಫೇಮಸ್ ಆಗಿದ್ದರು. ಈಗ ಅವರಿಗೆ ಸಿನಿಮಾದಲ್ಲಿ ದಶರಥನ ಪಾತ್ರ ನೀಡಲಾಗಿದೆ. ಶೂಟಿಂಗ್ ಸೆಟ್ನಲ್ಲಿ ಅವರು ಬಾಲ ಕಲಾವಿದರ ಜೊತೆ ನಟಿಸುತ್ತಿರುವ ಫೋಟೋಗಳು ಸೋರಿಕೆ ಆಗಿವೆ.
ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾದ ಸೆಟ್ ಫೋಟೋ ಲೀಕ್; ಸಖತ್ ಅದ್ದೂರಿ
ಇನ್ಮುಂದೆ ಚಿತ್ರತಂಡದವರು ಎಚ್ಚರಿಕೆಯಿಂದ ಇರಬೇಕಾಗಿರುವುದು ಅನಿವಾರ್ಯ. ‘ಚಿತ್ರೀಕರಣದ ಸ್ಥಳದಲ್ಲಿ ಮೊಬೈಲ್ ಫೋನ್ ನಿಷೇಧ ಮಾಡಿ’ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನಲಾಗಿದೆ. ಯಶ್ ಅವರು ರಾವಣನ ಪಾತ್ರ ಮಾಡುತ್ತಾರೆ ಎಂದು ಕೂಡ ಸುದ್ದಿ ಹಬ್ಬಿದೆ. ಆದರೆ ಯಾವುದರ ಬಗ್ಗೆಯೂ ಚಿತ್ರತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಮೂರು ಪಾರ್ಟ್ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. 2ನೇ ಪಾರ್ಟ್ನಲ್ಲಿ ರಾವಣನ ಪಾತ್ರ ಬರಲಿದ್ದು, ಆಗ ಯಶ್ ಕಾಣಿಸಿಕೊಳ್ಳುತ್ತಾರೆ ಎಂಬ ಮಾಹಿತಿ ಇದೆ. ಸದ್ಯಕ್ಕೆ ಬಾಲ ಕಲಾವಿದರ ದೃಶ್ಯಗಳನ್ನು ಚಿತ್ರಿಸಿಕೊಳ್ಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.