ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳು ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾಧುರಿ ದೀಕ್ಷಿತ್ ಅವರು ರಾಜಕೀಯಕ್ಕೆ ಬರುತ್ತಾರೆ, ಮುಂಬೈನ ಒಂದು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಜೋರಾಗಿದೆ. ಕೊನೆಗೂ ಈ ಬಗ್ಗೆ ನಡೆದ ಚರ್ಚೆಗಳಿಗೆ ಸ್ವತಃ ಮಾಧುರಿ ದೀಕ್ಷಿತ್ ಉತ್ತರ ನೀಡಿದ್ದಾರೆ. ಮಾಧುರಿ ದೀಕ್ಷಿತ್ (Madhuri Dixit) ತಮ್ಮ ಹೊಸ ಮರಾಠಿ ಚಿತ್ರ ‘ಪಂಚಕ್’ ಪ್ರಚಾರದಲ್ಲಿ ಬ್ಯುಸಿ ಆಗಿದ್ದು, ‘ಟಿವಿ9 ಮರಾಠಿ’ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ರಾಜಕೀಯ ಸೇರುವುದರ ಕುರಿತು ತಮ್ಮ ನಿಲುವು ಏನು ಎನ್ನುವ ಬಗ್ಗೆ ಮಾತನಾಡಿದ್ದಾರೆ.
ಮಾಧುರಿ ದೀಕ್ಷಿತ್ಗೆ ರಾಜಕೀಯ ಸೇರಲು ಇಷ್ಟ ಇಲ್ಲ. ಅವರು ಸಿನಿಮಾ ರಂಗದಲ್ಲೇ ಮುಂದುವರಿಯಲು ಬಯಸಿದ್ದಾರೆ. ‘ಚುನಾವಣೆ ಸಂದರ್ಭದಲ್ಲಿ ನಾನು ಸ್ಪರ್ಧಿಸುತ್ತೇನೆ ಎನ್ನುವ ಸುದ್ದಿ ಹರಿದಾಡುತ್ತದೆ. ಆದರೆ, ರಾಜಕೀಯ ನನ್ನ ಪ್ಯಾಷನ್ ಅಲ್ಲ. ನನ್ನ ಪಂಚಕ್ ಸಿನಿಮಾ ಯಶಸ್ಸು ಕಂಡರೆ ಮತ್ತೊಂದಷ್ಟು ಸಿನಿಮಾ ಮಾಡಲು ಪ್ರೇರಣೆ ಆಗುತ್ತದೆ’ ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ.
ಮಾಧುರಿ ದೀಕ್ಷಿತ್ ಅವರು ತಮ್ಮ ಕುಟುಂಬದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್ಗೆ ಕೊಂಕಣಿ ಬರುತ್ತದೆ ಎನ್ನುವ ಮಾತಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ನನಗೆ ಕೊಂಕಣಿ ಹೆಚ್ಚು ತಿಳಿದಿಲ್ಲ. ಆದರೆ ನನಗೆ ಅರ್ಥವಾಗುತ್ತದೆ. ನನ್ನ ಅಜ್ಜಿ ಕೊಂಕಣಿ ಹಾಡುಗಳನ್ನು ಹಾಡುತ್ತಿದ್ದರು. ನನ್ನ ತಾಯಿ ಮರಾಠಿ ಮಾತನಾಡುತ್ತಿದ್ದರು’ ಎಂದಿದ್ದಾರೆ. ಜನವರಿ 5ರಂದು ‘ಪಂಚಕ್’ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಗೋವಾ ಸಿನಿಮೋತ್ಸವದಲ್ಲಿ ನಟಿ ಮಾಧುರಿ ದೀಕ್ಷಿತ್ಗೆ ವಿಶೇಷ ಗೌರವ
ಮಾಧುರಿ ದೀಕ್ಷಿತ್ ಅವರು 1984ರಲ್ಲಿ ಬಾಲಿವುಡ್ಗೆ ಕಾಲಿಟ್ಟರು. ‘ಅಬೋದ್’ ಅವರ ನಟನೆಯ ಮೊದಲ ಸಿನಿಮಾ. ಆಗಿನ್ನೂ ಅವರಿಗೆ 17 ವರ್ಷ ವಯಸ್ಸು. 1988ರಲ್ಲಿ ರಿಲೀಸ್ ಆದ ‘ತೇಜಾಬ್’ ಸಿನಿಮಾ ಅವರ ಜನಪ್ರಿಯತೆ ಹೆಚ್ಚಿಸಿತು. ಆ ಚಿತ್ರದ ‘ಏಕ್ ದೋ ತೀನ್..’ ಹಾಡು ಸೂಪರ್ ಹಿಟ್ ಆಯಿತು. ಈ ಹಾಡಲ್ಲಿ ಡ್ಯಾನ್ಸ್ ಮಾಡಿ ಮಾಧುರಿ ಎಲ್ಲರ ಗಮನ ಸೆಳೆದರು. ‘ತೇಜಾಬ್’ ಚಿತ್ರದ ನಂತರ ಮಾಧುರಿ ಅವರ ಸ್ಟಾರ್ಗಿರಿ ಹೆಎಚ್ಚಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:22 am, Thu, 28 December 23