
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Madhuri Dixit) ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರಿಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಅವರು ಇತ್ತೀಚೆಗೆ ಕೆನಡಾಗೆ ತೆರಳಿದ್ದರು. ಅಲ್ಲಿ ಅವರು ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಬೇಕಿತ್ತು. ಅವರನ್ನು ನೋಡಬೇಕು ಎಂದು ವಿದೇಶದಲ್ಲಿ ಇದ್ದ ಭಾರತೀಯರು ಕಾದಿದ್ದರು. ಆದರೆ, ಅವರು ಶೋಗೆ ಮೂರು ಗಂಟೆ ತಡವಾಗಿ ತೆರಳಿ ಟ್ರೋಲ್ ಆಗಿದ್ದಾರೆ.
ಸಾಮಾನ್ಯವಾಗಿ ಭಾರತದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ಒಂದೆರಡು ಗಂಟೆ ತಡವಾಗಿ ತೆರಳಿದರೆ ಎಲ್ಲರೂ ಅದನ್ನು ಸಹಿಸಿಕೊಳ್ಳುತ್ತಾರೆ. ನೆಚ್ಚಿನ ಕಲಾವಿದರು ಈಗಲಾದರೂ ಬಂದರಲ್ಲ ಎಂದು ಹೆಮ್ಮೆ ಹೊರಹಾಕುತ್ತಾರೆ. ಆದರೆ, ಕೆನಡಾದಲ್ಲಿ ಆ ರೀತಿ ಆಗಿಲ್ಲ. ಅವರನ್ನು ಟೀಕಿಸಿದ್ದಾರೆ ಜೊತೆಗೆ ಶೋನ ಹಣ ಮರಳಿಸುವಂತೆ ಬೇಡಿಕೆ ಇಡುತ್ತಿದ್ದಾರೆ.
ಕೆನಡಾದ ಟೊರೊಂಟೊದಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಮಾಧುರಿ ಮೂರು ಗಂಟೆ ತಡವಾಗಿ ಅಲ್ಲಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅನೇಕ ಜನರನ್ನು ಕೆರಳಿಸಿದೆ ಮತ್ತು ಅವರನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಗಿದೆ. ಈ ವರ್ಷದ ಆರಂಭದಲ್ಲಿ, ಗಾಯಕಿ ನೇಹಾ ಕಕ್ಕರ್ ಅವರು ಮೆಲ್ಬೋರ್ನ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದಕ್ಕೆ ತಡವಾಗಿ ಆಗಮಿಸಿದಾಗ ವಿವಾದವನ್ನು ಸೃಷ್ಟಿಸಿದರು. ಸಾಮಾಜಿಕ ಮಾಧ್ಯಮದಲ್ಲಿಯೂ ಅವರನ್ನು ಟ್ರೋಲ್ ಮಾಡಲಾಯಿತು. ಕೊನೆಗೆ, ನೇಹಾ ತಮ್ಮ ಮೌನ ಮುರಿದು ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದರು.
‘ನಾನು ನಿಮಗೆ ಒಂದು ಸಲಹೆ ನೀಡಲು ಬಯಸುತ್ತೇನೆ. ಮಾಧುರಿ ದೀಕ್ಷಿತ್ ಅವರ ಪ್ರವಾಸಕ್ಕೆ ಹೋಗಬೇಡಿ. ನಿಮ್ಮ ಹಣವನ್ನು ಉಳಿಸಿ’ ಎಂದು ವಿಡಿಯೋ ಹಂಚಿಕೊಂಡು ಬರೆದುಕೊಳ್ಳಲಾಗಿದೆ. ಟಿಕೆಟ್‌ನಲ್ಲಿ ಕಾರ್ಯಕ್ರಮ 7:30 ಕ್ಕೆ ಪ್ರಾರಂಭವಾಗಲಿದೆ ಎಂದು ಬರೆಯಲಾಗಿತ್ತು. ಆದರೆ, ಅವರು 10 ಗಂಟೆಗೆ ವೇದಿಕೆಗೆ ಬಂದರು ಎಂದು ಅನೇಕ ವೀಕ್ಷಕರು ಹೇಳಿಕೊಂಡಿದ್ದಾರೆ. ಅನೇಕರು ಹಣ ಮರಳಿಸುವಂತೆ ಕೋರುತ್ತಿದ್ದಾರೆ.
‘ಇದು ಆಯೋಜಕರ ತಪ್ಪೋ ಅಥವಾ ಮಾಧುರಿ ಅವರ ತಪ್ಪೋ ನನಗೆ ಗೊತ್ತಿಲ್ಲ. ಆದರೆ ನಮ್ಮ ಮಾತ್ರ ವ್ಯರ್ಥ ಆಗಿದೆ’ ಎಂದು ಒಬ್ಬರು ಬರೆದಿದ್ದಾರೆ. ಇತರರು ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ‘ಎಲ್ಲರೂ ಇದನ್ನು ಗ್ರಾಹಕ ಸಂರಕ್ಷಣಾ ವೇದಿಕೆಗೆ ವರದಿ ಮಾಡಬೇಕು” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Tue, 4 November 25