
ಗೌತಮ್ ವಾಸುದೇವ್ ಮೆನನ್ (Gautham Vasudev Menon), ತಮಿಳಿನಲ್ಲಿ ಸ್ಟಾರ್ ನಿರ್ದೇಶಕರಾಗಿ ಮೆರೆದವರು. ಅವರ ತಮಿಳು ನಿರ್ದೇಶಕರು ಮಾಸ್, ಮಸಾಲ, ತಲೆ-ಬುಡವಿಲ್ಲದ ಕಮರ್ಶಿಯಲ್ ಸಿನಿಮಾಗಳನ್ನು ಮಾಡುವಾಗ ಗೌತಮ್ ವಾಸುದೇವ್ ಮೆನನ್ ‘ಅಪ್ಪಟ ಸಿನಿಮಾ’ಗಳನ್ನು ಮಾಡಿ ಹಿಟ್ ಮೇಲೆ ಹಿಟ್ ಕೊಟ್ಟವರು. ತಮಿಳು ಚಿತ್ರರಂಗಕ್ಕೆ ಹೊಸ ಮಾದರಿಯನ್ನೇ ಹಾಕಿಕೊಟ್ಟವರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಸೋಲಿನ ಮೇಲೆ ಸೋಲು ಗೌತಮ್ಗೆ ಎದುರಾಗಿದೆ. ತಮ್ಮ ಕಷ್ಟಗಳ ಬಗ್ಗೆ ಕೆಲವು ಸಂದರ್ಶನಗಳಲ್ಲಿ ಗೌತಮ್ ಹೇಳಿಕೊಂಡಿದ್ದಾರೆ ಸಹ. ಇದೀಗ ಹೈಕೋರ್ಟ್, ಗೌತಮ್ ಅವರಿಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ.
ಗೌತಮ್ ವಾಸುದೇವ್ ಮೆನನ್ ಅವರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದ್ದು, 4.25 ಕೋಟಿ ಹಣವನ್ನು ಬಡ್ಡಿಯ ಸಮೇತ ಆರ್ಎಸ್ ಇನ್ಫೋಟೇನ್ಮೆಂಟ್ ಹೆಸರಿನ ಸಂಸ್ಥೆಗೆ ನಿಗದಿತ ದಿನಾಂಕದ ಒಳಗಾಗಿ ಪಾವತಿ ಮಾಡುವಂತೆ ಹೇಳಿದೆ. ಈಗಾಗಲೇ ಸಾಕಷ್ಟು ನಷ್ಟದಲ್ಲಿರುವ ಗೌತಮ್ ವಾಸುದೇವ್ ಮೆನನ್ ಅವರಿಗೆ ಇದು ದೊಡ್ಡ ಶಾಕ್ ಆಗಿದೆ.
2008ರಲ್ಲಿ ನಡೆದ ವಿವಾದ ಇದಾಗಿದೆ. 2008 ರಲ್ಲಿ ಗೌತಮ್ ವಾಸುದೇವ್ ಮೆನನ್ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದರು ಆ ಸಿನಿಮಾಕ್ಕೆ ಆರ್ಎಸ್ ಇನ್ಫೋಟೇನ್ಮೆಂಟ್ ನ ಎಸ್ ಎಲ್ರೆಡ್ ಕುಮಾರ್ ನಿರ್ಮಾಪಕರಾಗಿದ್ದರು. ಪ್ರಾಜೆಕ್ಟ್ಗಾಗಿ ಅಡ್ವಾನ್ಸ್ ಮೊತ್ತವನ್ನು ಸಹ ಎಲ್ರೆಡ್ ಕುಮಾರ್ ನೀಡಿದ್ದರು. ಆದರೆ ಸಿನಿಮಾ ಪ್ರಾರಂಭವೇ ಆಗಲಿಲ್ಲ. ಆದರೆ ಗೌತಮ್ ಅವರು ಅಡ್ವಾನ್ಸ್ ಮೊತ್ತವನ್ನು ಹಿಂದಿರುಗಿಸಲಿಲ್ಲ. ಆದರೆ 2012 ರಲ್ಲಿ ಬಿಡುಗಡೆ ಆದ ‘ನೀ ದಾನೆ ಎನ್ ಪೊನ್ವಸಂತಮ್’ ಸಿನಿಮಾಕ್ಕೆ ಆ ಅಡ್ವಾನ್ಸ್ ಅನ್ನು ಬಳಸಿದ್ದಾಗಿ ಗೌತಮ್ ಹೇಳಿದ್ದಾರೆ. ಆದರೆ ಅದಕ್ಕೆ ಸೂಕ್ತ ಸಾಕ್ಷ್ಯಗಳನ್ನು ನೀಡಿಲ್ಲ. ಇದೇ ಕಾರಣಕ್ಕೆ 2013 ರಲ್ಲಿ ಎಸ್ ಎಲ್ರೆಡ್ ಕುಮಾರ್ ದೂರು ದಾಖಲಿಸಿದ್ದರು. ಇದೀಗ ಮದ್ರಾಸ್ ಹೈಕೋರ್ಟ್ ಸೂಚಿಸಿರುವಂತೆ 4.25 ಕೋಟಿ ಹಣದ ಜೊತೆಗೆ 12 ಲಕ್ಷ ರೂಪಾಯಿ ಹೆಚ್ಚುವರಿ ಹಣವನ್ನು ಸಹ ಅವರು ನೀಡಬೇಕಿದೆ.
ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾ ವಿವಾದ: ಕೆಆರ್ಜಿ ಅರ್ಜಿಗೆ ನಿರ್ಮಾಪಕರಿಗೆ ನೊಟೀಸ್
ಗೌತಮ್ ವಾಸುದೇವ್ ಮೆನನ್, ಕೆಲವು ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನೀಡಿದ್ದಾರೆ. ‘ಮಿನ್ನಲೆ’, ‘ರೆಹನಾ ಹೇ ತೇರೆ ದಿಲ್ ಮೇ’, ‘ಕಾಕ ಕಾಕ’, ‘ವೇಟ್ಟೆಯಾಡು ವಿಲೆಯಾಡು’, ‘ವಾರನಂ ಆಯಿರುಂ’, ‘ಯೇ ಮಾಯ ಚೇಸಾವೆ’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಅವರು ನಿರ್ದೇಶಿಸಿರುವ ‘ಧ್ರುವ ನಚ್ಚತ್ತಿರಂ’ ಸಿನಿಮಾ ಹಲವು ವರ್ಷಗಳಿಂದ ಬಿಡುಗಡೆ ಆಗದೆ ನಿಂತಿದೆ. 2017 ರಲ್ಲಿ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಹಣಕಾಸಿನ ಸಮಸ್ಯೆ, ಕೋರ್ಟ್ ಸಮಸ್ಯೆಗಳಿಂದಾಗಿ ಇಂದಿಗೂ ಬಿಡುಗಡೆ ಆಗಿಲ್ಲ. ಆ ಸಿನಿಮಾ ಬಿಡುಗಡೆ ಆಗದ ಹೊರತು ಹೊಸ ಸಿನಿಮಾ ಮಾಡುವುದಿಲ್ಲ ಎಂದು ಗೌತಮ್ ಹೇಳಿದ್ದಾರೆ. ‘ಧ್ರುವ ನಚ್ಚತ್ತಿರಮ್’ ಸಿನಿಮಾ ಸಮಸ್ಯೆಯಲ್ಲಿರುವಾಗ ಈಗ ಮದ್ರಾಸ್ ಹೈಕೋರ್ಟ್ ಮತ್ತೊಂದು ಹೊಸ ಶಾಕ್ ಅನ್ನು ಗೌತಮ್ ಅವರಿಗೆ ನೀಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Wed, 25 March 26