
ಖ್ಯಾತ ನಟಿ ಮಲೈಕಾ ಅರೋರಾ (Malaika Arora) ಅವರ ಅಭಿಮಾನಿಗಳ ಪಾಲಿಗೆ ಇದು ಬೇಸರದ ಸುದ್ದಿ. ಮಲೈಕಾ ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಶನಿವಾರ (ಏ.2) ಈ ಘಟನೆ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲೈಕಾ ಅರೋರಾ ಅವರ ತಲೆಗೆ ಪೆಟ್ಟು ಬಿದ್ದಿದೆ ಎಂಬ ಮಾಹಿತಿ ಕೇಳಿಬಂದಿದೆ. ಕಣ್ಣಿಗೂ ಸಹ ಗಾಯ ಆಗಿದೆ ಎನ್ನಲಾಗುತ್ತಿದೆ. ಪುಣೆಯಲ್ಲಿ ಒಂದು ಫ್ಯಾಷನ್ ಇವೆಂಟ್ ಮುಗಿಸಿಕೊಂಡು ವಾಪಸ್ ಬರುವಾಗ ಈ ಅಪಘಾತ (Malaika Arora Car Accident) ಸಂಭವಿಸಿದೆ. ಮುಂಬೈನ ಖಾಸಗಿ ಆಸ್ಪತ್ರೆ ಮಲೈಕಾ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆಕ್ಸಿಡೆಂಟ್ನಿಂದ ಜಖಂ ಆಗಿರುವ ಕಾರಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲೈಕಾ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಪ್ರಾರ್ಥಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಈ ಅಪಘಾತ ಸಂಭವಿಸಿದಾಗ ಕಾರಿನಲ್ಲಿ ಮಲೈಕಾ ಅವರ ಬಾಡಿಗಾರ್ಡ್ ಮತ್ತು ಕಾರು ಚಾಲಕ ಕೂಡ ಇದ್ದರು ಎನ್ನಲಾಗಿದೆ. ‘ಮಲೈಕಾ ಅರೋರಾ ಅವರ ಹಣೆಗೆ ಚಿಕ್ಕ ಗಾಯಗಳು ಆಗಿವೆ. ಸಿಟಿ ಸ್ಕ್ಯಾನ್ ಮಾಡಲಾಗಿದೆ. ಯಾವುದೇ ಅಪಾಯ ಇಲ್ಲ ಎಂಬುದು ತಿಳಿದುಬಂದಿದೆ. ರಾತ್ರಿ ಅವರ ಆರೋಗ್ಯವನ್ನು ಗಮನಿಸಿ, ನಂತರ ಡಿಸ್ಚಾರ್ಜ್ ಮಾಡಲಾಗುವುದು’ ಎಂದು ವೈದ್ಯರು ತಿಳಿಸಿದ್ದಾರೆ. ಈ ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಆ್ಯಕ್ಸಿಡೆಂಟ್ ಸಂಭವಿಸಿದಾಗ ಮೂರು ಕಾರುಗಳು ಜಖಂ ಆಗಿವೆ. ಎಲ್ಲ ವಾಹನಗಳ ನೋಂದಣಿ ಸಂಖ್ಯೆ ಮತ್ತಿತರ ವಿವರಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಈಗಾಗಲೇ ತನಿಖೆ ಆರಂಭ ಆಗಿದೆ. ಶೀಘ್ರವೇ ಎಫ್ಐಆರ್ ದಾಖಲಾಗಲಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ‘ಮಲೈಕಾ ಚೇತರಿಸಿಕೊಳ್ಳುತ್ತಾ ಇದ್ದಾರೆ’ ಎಂದು ಅವರ ಸಹೋದರಿ ಅಮೃತಾ ಅರೋರಾ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಮಲೈಕಾ ಅರೋರಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಐಟಂ ಸಾಂಗ್ಗಳಲ್ಲಿ ಕಾಣಿಸಿಕೊಂಡು ಅವರು ಫೇಮಸ್ ಆಗಿದ್ದಾರೆ. ಈಗಲೂ ಅವರಿಗೆ ಅಷ್ಟೇ ಬೇಡಿಕೆ ಇದೆ. ಫಿಟ್ನೆಸ್ ವಿಚಾರದಲ್ಲಿ ಅನೇಕರಿಗೆ ಮಲೈಕಾ ಮಾದರಿ ಆಗಿದ್ದಾರೆ. ಈಗ ಅವರಿಗೆ 48ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಹದಿಹರೆಯದ ಹುಡುಗಿಯರೂ ನಾಚುವಂತೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಇನ್ನು, ಅವರು ವೈಯಕ್ತಿಕ ವಿಚಾರದಿಂದಲೂ ಆಗಾಗ ಸುದ್ದಿ ಆಗುವುದುಂಟು. ನಟ ಅರ್ಜುನ್ ಕಪೂರ್ ಜೊತೆ ಮಲೈಕಾ ಲಿವ್-ಇನ್-ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂಬುದು ಬಹಿರಂಗ ಸತ್ಯ. ತಮ್ಮ ಪ್ರೀತಿಯ ವಿಚಾರವನ್ನು ಈ ಜೋಡಿ ಹಕ್ಕಿಗಳು ಮುಚ್ಚಿಟ್ಟಿಲ್ಲ. ಇಬ್ಬರ ನಡುವಿನ ಆಪ್ತತೆಗೆ ಅನೇಕ ಫೋಟೋಗಳು ಸಾಕ್ಷಿ ಒದಗಿಸುತ್ತವೆ.
ಇದನ್ನೂ ಓದಿ:
‘ಅಮೇರಿಕನ್ ಗಾಯಕಿಯರ ಉಡುಪನ್ನು ಹೊಗಳುವವರು, ನಮ್ಮನ್ನು ಟ್ರೋಲ್ ಮಾಡುವುದೇಕೆ?’; ಮಲೈಕಾ ನೇರ ಪ್ರಶ್ನೆ
ವೀಕೆಂಡ್ ಮೂಡಲ್ಲಿ ನಟಿ ಮಲೈಕಾ ಅರೋರಾ; ಕಲರ್ಪುಲ್ ಡ್ರೆಸ್ನಲ್ಲಿ ಮಿಂಚಿದ ಹಾಟ್ ಬೆಡಗಿ; ಇಲ್ಲಿವೆ ಫೋಟೋಗಳು
Published On - 7:58 am, Sun, 3 April 22