ಆರ್.ಚಂದ್ರು (R Chandru) ನಿರ್ದೇಶಿಸಿ ಉಪೇಂದ್ರ (Upendra) ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ (Kabzaa) ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಿನಿಮಾ ದೊಡ್ಡ ಯಶಸ್ಸು ಗಳಿಸಿದೆ ಎಂದು ಸ್ವತಃ ಆರ್.ಚಂದ್ರು ಹೇಳಿಕೊಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಯಶಸ್ಸಾದರೂ ಸಹ ಸಿನಿಮಾದ ಬಗ್ಗೆ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿದ್ದವು. ಕರ್ನಾಟಕದಲ್ಲಿ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಸಿನಿಮಾ ಅಷ್ಟಾಗಿ ಏನೂ ಗಳಿಕೆ ಮಾಡಲಿಲ್ಲ ಎಂದೇ ಹೇಳಲಾಗಿತ್ತು. ಇದೀಗ ಮುಂಬೈನ ಹಿರಿಯ ಹಾಗೂ ಜನಪ್ರಿಯ ಸಿನಿಮಾ ಪ್ರದರ್ಶಕರೊಬ್ಬರು ಕಬ್ಜ ಸಿನಿಮಾದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಬೈನ ಹಳೆಯ, ಅತ್ಯಂತ ಜನಪ್ರಿಯ ಹಾಗೂ ದೊಡ್ಡ ಚಿತ್ರಮಂದಿರವಾದ ಮರಾಠ ಮಂದಿರ್ನ ಮಾಲೀಕ ಹಾಗೂ ಗಯೇಟಿ ಗ್ಯಾಲೆಕ್ಸಿ ಹೆಸರಿನ ಮಲ್ಟಿಪ್ಲೆಕ್ಸ್ ಅನ್ನೂ ಹೊಂದಿರುವ ಮನೋಜ್ ದೇಸಾಯಿ ಕಬ್ಜ ಸಿನಿಮಾದ ಬಗ್ಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಸಿನಿಮಾವು ಮುಂಬೈನಲ್ಲಿ ಫ್ಲಾಪ್ ಆಗಿದೆ ಎಂದಿದ್ದಾರೆ.
ಕಬ್ಜ ಸಿನಿಮಾ ಪ್ರೇಕ್ಷಕರನ್ನು ಕಬ್ಜ ಮಾಡಿಕೊಳ್ಳುವಲ್ಲಿ ಸೋತಿತು. ನಾವು ಲಾಭ ಮಾಡಿಕೊಳ್ಳಲು ಆಗಲಿಲ್ಲ. ಚಿತ್ರವನ್ನು ತೆಗೆದು ಬೇರೆ ಸಿನಿಮಾ ಹಾಕಬೇಕಾಯಿತು ಎಂದಿದ್ದಾರೆ. ಸಿನಿಮಾದ ಕತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮನೋಜ್, ದೇಶಪ್ರೇಮಿಯಾಗಿದ್ದ ವ್ಯಕ್ತಿ ಭೂಗತ ಪಾತಕಿ ಆಗಿ ತಲೆಗಳನ್ನು ತುಂಡರಿಸುತ್ತಾ ಹೋಗುತ್ತಾನೆ. ವಿಪರೀತ ಹಿಂಸೆಗಳುಳ್ಳ ದೃಶ್ಯಗಳು ಸಿನಿಮಾದಲ್ಲಿವೆ. ಅದು ಜನರಿಗೆ ಇಷ್ಟವಾಗಲಿಲ್ಲ ಎನಿಸುತ್ತದೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ, ಜನರು ಆ ಸಿನಿಮಾವನ್ನು ತಿರಸ್ಕರಿಸಿದರು ಎಂದಿದ್ದಾರೆ ಮನೋಜ್.
ಮನೋಜ್ ದೇಸಾಯಿ, ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ತಮ್ಮದೇ ಚಿತ್ರಮಂದಿರದಲ್ಲಿ 777 ಚಾರ್ಲಿ, ಕೆಜಿಎಫ್, ಕಾಂತಾರ ಕನ್ನಡ ಸಿನಿಮಾಗಳ ಹಿಂದಿ ಆವೃತ್ತಿಗಳನ್ನು ಪ್ರದರ್ಶಿಸಿ ಜನರಿಗೆ ಸಿನಿಮಾ ತಲುಪುವಂತೆ ಮಾಡಿದ್ದಾರೆ. ಆದರೆ ಈ ಬಾರಿ ಕಬ್ಜ ಸಿನಿಮಾ ಅವರಿಗೆ ನಿರಾಸೆ ಮೂಡಿಸಿದೆ.
ಮನೋಜ್ ದೇಸಾಯಿ ಒಡೆತನದ ಮರಾಠ ಚಿತ್ರಮಂದಿರ ಮಹಾರಾಷ್ಟ್ರದ ಹಳೆಯ ಚಿತ್ರಮಂದಿರಗಳಲ್ಲಿ ಒಂದು 1958 ರಲ್ಲಿ ಪ್ರಾರಂಭವಾದ ಈ ಚಿತ್ರಮಂದಿರದಲ್ಲಿ ಬರೋಬ್ಬರಿ 1000 ಮಂದಿ ಒಟ್ಟಿಗೆ ಕೂತು ಸಿನಿಮಾ ನೋಡಬಹುದು. ಶಾರುಖ್ ಖಾನ್ ನಟನೆಯ ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ ಸಿನಿಮಾ ಸತತ 28 ವರ್ಷಗಳಿಂದಲೂ ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಲೇ ಇದೆ.
ಇದನ್ನೂ ಓದಿ: Kabzaa Movie: ‘ಕಬ್ಜ 2’ ಸಿನಿಮಾ ಹೇಗಿರಲಿದೆ? ಉತ್ತರ ಕೊಟ್ಟ ನಿರ್ದೇಶಕ ಆರ್. ಚಂದ್ರು
ಇನ್ನು ಕಬ್ಜ ಸಿನಿಮಾದ ವಿಷಯಕ್ಕೆ ಮರಳುವುದಾದರೆ, ಕನ್ನಡದ ಈ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಚ್ 17 ರಂದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಉಪೇಂದ್ರ ನಾಯಕನಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಶ್ರಿಯಾ ಶರಣ್ ನಾಯಕಿ. ಸಿನಿಮಾ ನಿರ್ದೇಶನ ಮಾಡಿದ್ದ ಆರ್.ಚಂದ್ರು ಸಹ ನಿರ್ಮಾಪಕರೂ ಆಗಿದ್ದರು. ರವಿ ಬಸ್ರೂರು ಸಂಗೀತ ಸಿನಿಮಾಕ್ಕಿತ್ತು. 4000 ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆ ಆಗಿ ಕೆಲವೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿಕೊಂಡಿತು. ಇನ್ನು ಕೆಲವೇ ದಿನಗಳಲ್ಲಿ ಒಟಿಟಿಗೆ ಸಹ ಬರಲಿದೆ ಸಿನಿಮಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ