Nepotism: ಬಾಲಿವುಡ್ನಲ್ಲಿ ಇರುವ ಹುಳುಕು ಒಂದೆರಡಲ್ಲ; ಆರೋಪ ಮಾಡಿದವರ ದೊಡ್ಡ ಪಟ್ಟಿ ಇಲ್ಲಿದೆ..
Hindi Film Industry: ಹಿಂದಿ ಚಿತ್ರರಂಗದಲ್ಲಿ ಅನೇಕ ಪಿಡುಗುಗಳಿವೆ. ಆ ಬಗ್ಗೆ ಹಲವು ಸೆಲೆಬ್ರಿಟಿಗಳು ಮಾತನಾಡಿದ್ದುಂಟು. ಪ್ರಿಯಾಂಕಾ ಚೋಪ್ರಾ ಹೇಳಿಕೆ ನೀಡಿದ ಬೆನ್ನಲ್ಲೇ ಆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಹೊರಗಿನಿಂದ ನೋಡುವವರಿಗೆ ಬಾಲಿವುಡ್ (Bollywood) ಬಗ್ಗೆ ಏನೇನೋ ಭ್ರಮೆಗಳು ಇರುತ್ತವೆ. ಆದರೆ ಒಳಗಿನ ಪರಿಸ್ಥಿತಿ ಹಾಗೆ ಇರುವುದಿಲ್ಲ. ಚಿತ್ರರಂಗದೊಳಗೆ ಹಲವು ಹುಳುಕುಗಳು ಇರುತ್ತವೆ. ಹಿಂದಿ ಚಿತ್ರರಂಗದಲ್ಲಿನ ಒಳರಾಜಕೀಯದ ಬಗ್ಗೆ ಈಗಾಗಲೇ ಅನೇಕರು ಹೇಳಿದ್ದುಂಟು. ಮೊದಲೆಲ್ಲ ಈ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಆದರೆ ಸುಶಾಂತ್ ಸಿಂಗ್ ರಜಪೂತ್ ನಿಧನರಾದ ನಂತರ ಒಂದೊಂದೇ ವಿಚಾರಗಳು ಹೊರಬರಲು ಆರಂಭ ಆದವು. ಕಂಗನಾ ರಣಾವತ್ (Kangana Ranaut), ಅಭಿನವ್ ಕಶ್ಯಪ್ ಸೇರಿದಂತೆ ಅನೇಕರು ಬಿ-ಟೌನ್ ರಹಸ್ಯಗಳನ್ನು ಬಯಲು ಮಾಡಿದ್ದಾರೆ. ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಹಲವು ಸಂಗತಿಗಳನ್ನು ಬಾಯಿ ಬಿಟ್ಟಿದ್ದಾರೆ. ಇಷ್ಟೇ ಅಲ್ಲ, ಬಾಲಿವುಡ್ ಕರ್ಮಕಾಂಡಗಳ ಬಗ್ಗೆ ಆರೋಪ ಮಾಡಿದವರ ದೊಡ್ಡ ಪಟ್ಟಿಯೇ ಇದೆ.
ಪ್ರಿಯಾಂಕಾ ಚೋಪ್ರಾ:
ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ತೊರೆದು ಹಲವು ವರ್ಷಗಳೇ ಕಳೆದಿವೆ. ಇಷ್ಟು ವರ್ಷಗಳ ಕಾಲ ಅವರು ಹಿಂದಿ ಚಿತ್ರರಂಗದ ಹುಳುಕುಗಳ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮೌನ ಮುರಿದಿದ್ದಾರೆ. ಬಾಲಿವುಡ್ನಲ್ಲಿನ ಕೆಲವರಿಂದಾಗಿ ತಾವು ಕಷ್ಟ ಅನುಭವಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಟ್ಟು ಹಾಲಿವುಡ್ಗೆ ಹೋಗಿದ್ದು ಯಾಕೆ? ಕಡೆಗೂ ಬಾಯ್ಬಿಟ್ಟ ನಟಿ
ಕಂಗನಾ ರಣಾವತ್:
ರೆಬೆಲ್ ವ್ಯಕ್ತಿತ್ವದಿಂದಲೇ ಕಂಗನಾ ರಣಾವತ್ ಅವರು ಫೇಮಸ್ ಆಗಿದ್ದಾರೆ. ಬಿ-ಟೌನ್ನ ಹಲವರ ಬಗ್ಗೆ ಅವರು ಆರೋಪ ಮಾಡಿದ್ದಾರೆ. ನೆಪೋಟಿಸಂ ಕುರಿತು ಅವರ ಆಗಾಗ ಕಿಡಿಕಾರುತ್ತಾರೆ. ಕರಣ್ ಜೋಹರ್ ವಿರುದ್ಧ ಕಂಗನಾ ಅನೇಕ ಬಾರಿ ನೇರವಾಗಿ ಟೀಕೆ ಮಾಡಿದ್ದಾರೆ.
ಅಭಿನವ್ ಕಶ್ಯಪ್:
ನಿರ್ದೇಶಕ ಅಭಿನವ್ ಕಶ್ಯಪ್ ಅವರು ಸಲ್ಮಾನ್ ಖಾನ್ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು. ಸಲ್ಲು ಫ್ಯಾಮಿಲಿಯಿಂದಾಗಿ ತಮ್ಮ ಭವಿಷ್ಯವೇ ಹಾಳಾಯಿತು ಎಂದು ಅಭಿನವ್ ಕಶ್ಯಪ್ ಹೇಳಿದ್ದರು. ತಮಗೆ ಆದ ಕಿರುಕುಳದ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಎಳೆಎಳೆಯಾಗಿ ವಿವರಿಸಿದ್ದರು.
ಇದನ್ನೂ ಓದಿ: ಹಾಲಿವುಡ್ ಎಂಟ್ರಿ ಬಗ್ಗೆ ಪರ-ವಿರೋಧ ಚರ್ಚೆ; ಶಾರುಖ್ ಹೇಳಿಕೆಗೆ ಉತ್ತರ ಕೊಟ್ಟ ಪ್ರಿಯಾಂಕಾ ಚೋಪ್ರಾ
ಎ.ಆರ್. ರೆಹಮಾನ್:
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರಿಗೂ ಬಾಲಿವುಡ್ನಲ್ಲಿ ಕಿರುಕುಳ ತಪ್ಪಿಲ್ಲ. ಅವರಿಗೆ ಹಿಂದಿಯಲ್ಲಿ ದೊಡ್ಡ ಪ್ರಾಜೆಕ್ಟ್ ಸಿಗದಂತೆ ಮಾಡಲು ಒಂದು ಗುಂಪು ಕೆಲಸ ಮಾಡಿದೆ. ತಮ್ಮ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ರಣವೀರ್ ಶೋರಿ:
ನಟ ರಣವೀರ್ ಶೋರಿ ಅವರು ಕೂಡ ಬಾಲಿವುಡ್ನಲ್ಲಿ ದೌರ್ಜನ್ಯ ಎದುರಿಸಿದ್ದಾರೆ. ಅವರಿಗೆ ಅವಕಾಶ ಸಿಗದಂತೆ ಮಾಡಲಾಗಿತ್ತು. ಎಲ್ಲ ಕಡೆಗಳಿಂದ ಒತ್ತಡ ಹೇರಲಾಗಿತ್ತು. ರಣವೀರ್ ಶೋರಿ ಓರ್ವ ಮದ್ಯ ವ್ಯಸನಿ ಎಂದು ಗಾಸಿಪ್ ಹಬ್ಬಿಸಲಾಗಿತ್ತು. ಅದರಿಂದ ಅವರು ಹತಾಶೆಗೆ ಒಳಗಾದರು. ತೀರಾ ಅಸಹಾಯಕ ಸ್ಥಿತಿ ಎದುರಾದಾಗ ಅವರು ದೇಶ ಬಿಟ್ಟು ತೆರಳಿದ್ದರು.
ಇದನ್ನೂ ಓದಿ: ಕಂಗನಾ ರಣಾವತ್ ಚಿತ್ರಕ್ಕೆ ಸಂಕಷ್ಟ; ಆರು ಕೋಟಿ ರೂ. ಹಿಂದಿರುಗಿಸಲು ಬೇಡಿಕೆ ಇಟ್ಟ ಹಂಚಿಕೆದಾರ
ತಿಗ್ಮಾನ್ಶು ದುಲಿಯಾ:
ಬಾಲಿವುಡ್ನಲ್ಲಿ ಗುಂಪುಗಾರಿಕೆ ಇದೆ. ಅದರಿಂದಾಗಿ ಭಾರತೀಯ ಚಿತ್ರರಂಗ ಮುಂದುವರಿಯುತ್ತಿಲ್ಲ ಎಂಬುದು ತಿಗ್ಮಾನ್ಶು ದುಲಿಯಾ ಅವರ ಆರೋಪ. ‘ಬಾಲಿವುಡ್ನಲ್ಲಿ ಎರಡು ಗ್ರೂಪ್ ಇದೆ. ಅವರು ಚಿತ್ರರಂಗಕ್ಕಾಗಿ ಏನನ್ನೂ ಮಾಡುತ್ತಿಲ್ಲ. ಕೇವಲ ಹಣ ಗಳಿಸುತ್ತಿದ್ದಾರೆ’ ಎಂದು ತಿಗ್ಮಾನ್ಶು ದುಲಿಯಾ ಆರೋಪಿಸಿದ್ದಾರೆ.
ಸೋನು ನಿಗಮ್:
ನಟನೆ ಮಾತ್ರವಲ್ಲದೇ ಬಾಲಿವುಡ್ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ ಕಿರುಕುಳ ನೀಡಲಾಗುತ್ತದೆ ಎಂದು ಸೋನು ನಿಗಮ್ ಅವರು ಹೇಳಿದ್ದರು. ದೊಡ್ಡ ದೊಡ್ಡ ಆಡಿಯೋ ಕಂಪನಿಗಳಿಂದ ಅನೇಕ ಪ್ರತಿಭಾವಂತರಿಗೆ ತೊಂದರೆ ಆಗಿದೆ ಎಂದು ಅವರು ಆರೋಪಿಸಿದ್ದರು. ಅವರ ಮಾತಿಗೆ ಹಲವು ಗಾಯಕರು ಸಹಮತ ಸೂಚಿಸಿದ್ದರು.
ಇದನ್ನೂ ಓದಿ: ಬೇರೆಲ್ಲ ರಿಯಾಲಿಟಿ ಶೋಗಳಿಗೆ ಬೈಯ್ಯುವ ಸೋನು ನಿಗಮ್ ಈ ಒಂದು ಶೋಗೆ ಜಡ್ಜ್ ಆಗಲು ಒಪ್ಪಿದ್ದೇಕೆ?
ಅಮಿತ್ ಸದ್:
ನಟ ಅಮಿತ್ ಸದ್ ಅವರಿಗೆ ಬಾಲಿವುಡ್ನಲ್ಲಿ ಗೆಲುವು ಸಿಕ್ಕಿದೆ. ಆದರೆ ಹಿಂದಿ ಕಿರುತೆರೆಯಲ್ಲಿ ಅವರನ್ನು ತುಳಿಯಲಾಗಿದೆ. ನೇರವಾಗಿ ಮಾತನಾಡಿದ್ದಕ್ಕಾಗಿ ತಮ್ಮಗೆ ಅವಕಾಶಗಳನ್ನೇ ನೀಡಲಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಅದಕ್ಕಾಗಿಯೇ ಅವರು ಕಿರುತೆರೆ ಬಿಟ್ಟು ಹಿರಿತೆರೆಗೆ ಬಂದರು.
ಹೇಳುತ್ತಾ ಹೋದರೆ ಪಟ್ಟಿ ಮುಂದುವರಿಯುತ್ತದೆ. ಹೊರಗಿನವರಿಗೆ ಹಿಂದಿ ಚಿತ್ರರಂಗವು ಗೌರವ ನೀಡುವುದಿಲ್ಲ ಎಂದು ಮನೋಜ್ ಬಾಜಪಾಯಿ ಹೇಳಿದ್ದರು. ನಟ ಗೋವಿಂದ ಅವರ ಸಿನಿಮಾಗಳು ಸೋಲಿನ ಸುಳಿಗೆ ಸಿಲುಕಿದಾಗ ಅನೇಕರು ತೊಂದರೆ ನೀಡಿದ್ದರು ಎಂದು ಶತ್ರುಘ್ನ ಸಿನ್ಹಾ ಹೇಳಿದ್ದರು. ‘ಖಂಡಿತವಾಗಿಯೂ ಇಲ್ಲಿ ನೆಪೋಟಿಸಂ ಇದೆ. ಯಶ್ ರಾಜ್ ಫಿಲ್ಮ್ಸ್ ಮತ್ತು ಕರಣ್ ಜೋಹರ್ ಅವರು ನನಗೆ ಯಾವತ್ತೂ ಅವಕಾಶ ನೀಡಲ್ಲ’ ಎಂದು ಶ್ರೇಯಸ್ ತಲ್ಪಡೆ ಹೇಳಿದ್ದರು. ಹೀಗೆ ಬಾಲಿವುಡ್ನ ಕರ್ಮಕಾಂಡಗಳು ಒಂದೊಂದಾಗಿಯೇ ಹೊರಬರುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:02 pm, Wed, 29 March 23