Virushka: ವಿರಾಟ್ ಕೊಹ್ಲಿಯ ಕುಡಿತದ ಚಟದ ಬಗ್ಗೆ ಮಾತನಾಡಿದ ಪತ್ನಿ ಅನುಷ್ಕಾ ಶರ್ಮಾ
ಎರಡು ಪೆಗ್ ಬಳಿಕ ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದರು ಎಂದು ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ. ಅಂದಹಾಗೆ ಈಗ ವಿರಾಟ್ ಕೊಹ್ಲಿ ಮದ್ಯ ಸೇವನೆ ತ್ಯಜಿಸಿದ್ದಾರೆ.
ಭಾರತದ ಟಾಪ್ ಸೆಲೆಬ್ರಿಟಿ ದಂಪತಿ ಜೋಡಿಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿಯೂ ಒಂದು. ಇಬ್ಬರೂ ತಮ್ಮ-ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮರು. ಒಟ್ಟಿಗೆ ಹಲವು ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ವಿರಾಟ್ ಹಾಗೂ ಅನುಷ್ಕಾ ಅವಕಾಶ ಸಿಕ್ಕಾಗೆಲ್ಲ ಪರಸ್ಪರರ ಬಗ್ಗೆ ಪ್ರೀತಿ, ಗೌರವಗಳನ್ನು ಪ್ರದರ್ಶಿಸುತ್ತಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಯ ಬಗ್ಗೆ ತಮಾಷೆಯಾಗಿ ಮಾತನಾಡುತ್ತಾ, ಕೊಹ್ಲಿ ಕುಡಿದಾಗ ಮಾಡುವ ಕೆಲಸದ ಬಗ್ಗೆ ಮಾತನಾಡಿದ್ದಾರೆ.
ಪಾರ್ಟಿಗಳಿಗೆ ಹೋದಾಗ ಯಾರು ಬೇಗ ಅಲ್ಲಿದ್ದವರನ್ನೆಲ್ಲ ಸೆಳೆಯುತ್ತಾರೆ ಎಂಬರ್ಥದ ಪ್ರಶ್ನೆಗೆ ಉತ್ತರಿಸಿರುವ ನಟಿ ಅನುಷ್ಕಾ ಶರ್ಮಾ, ಅದು ವಿರಾಟ್ ಕೊಹ್ಲಿಯೇ. ಅವರು ಕುಡಿದರೆ ಕೂಡಲೇ ಡ್ಯಾನ್ಸ್ ಫ್ಲೋರ್ಗೆ ಹೋಗಿ ಡ್ಯಾನ್ಸ್ ಮಾಡಲು ಶುರು ಮಾಡುತ್ತಾರೆ. ಅವರು ಡ್ಯಾನ್ಸ್ ಮಾಡಲು ಆರಂಭ ಮಾಡಿದರೆ ಎಲ್ಲರೂ ಅವರನ್ನೇ ನೋಡಬೇಕು ಹಾಗೆ ಕುಣಿಯುತ್ತಾರೆ ಎಂದಿದ್ದಾರೆ ನಟಿ ಅನುಷ್ಕಾ ಶರ್ಮಾ.
ಪತ್ನಿಯ ಮಾತಿಗೆ ಹೌದೆಂದಿರುವ ವಿರಾಟ್ ಕೊಹ್ಲಿ, ಹೌದು, ನಾನು ಎರಡು ಪೆಗ್ಗಳಿಗಿಂತಲೂ ಹೆಚ್ಚು ಕುಡಿದೆನೆಂದರೆ ಡ್ಯಾನ್ಸ್ ಮಾಡಲು ಆರಂಭಿಸುತ್ತೇನೆ. ನನ್ನನ್ನು ತಡೆಯುವುದು ಯಾರಿಗೂ ಸಾಧ್ಯವಿಲ್ಲ. ಬೇರೆ ವಿಚಾರಗಳನ್ನೇ ಮರೆತು ಕುಣಿಯುವುದಕ್ಕೆ ತೊಡಗಿಬಿಡುತ್ತೇನೆ. ಆದರೆ ಆ ನನ್ನ ವರ್ತನೆ ನನಗೇ ಇಷ್ಟವಾಗುವುದಿಲ್ಲ. ಹಾಗಾಗಿ ನಾನು ಮದ್ಯ ಸೇವನೆ ನಿಲ್ಲಿಸಿದ್ದೇನೆ. ಆಗ ಎರಡು ಮೂರು ಪೆಗ್ ಬಳಿಕ ಏನೂ ಯೋಚಿಸದೆ ಬಿಂದಾಸ್ ಆಗಿ ವರ್ತಿಸುತ್ತಿದ್ದೆ. ಆದರೆ ಆಗಿನ ನನ್ನ ವರ್ತನೆ ನನಗೇ ಇಷ್ಟವಾಗುತ್ತಿಲ್ಲ” ಎಂದಿದ್ದಾರೆ ಕೊಹ್ಲಿ.
ವಿರಾಟ್ ಕೊಹ್ಲಿ, ಕುಡಿದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿವೆ. ಐಪಿಎಲ್ ಪಾರ್ಟಿಗಳಿಗೆ ರಂಗು ತುಂಬುತ್ತಿದ್ದಿದ್ದೇ ವಿರಾಟ್ ಕೊಹ್ಲಿ ಎಂದು ಅವರ ತಂಡದ ಸಹ ಆಟಗಾರರು ಹೇಳಿದ್ದಿದೆ. ಐಪಿಎಲ್ ಪಂದ್ಯಾವಳಿಯ ಸಮಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಅವರ ತಂಡ ಕ್ರೂಸ್ ಒಂದರಲ್ಲಿ ಕುಡಿದು ಚೆನ್ನಾಗಿ ಪಾರ್ಟಿ ಮಾಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು.
ಆದರೆ ಈಗ ವಿರಾಟ್ ಕೊಹ್ಲಿ ಮದ್ಯ ಸೇವನೆ ತ್ಯಜಿಸಿದ್ದಾರೆ ಮಾತ್ರವಲ್ಲ ಫಿಟ್ನೆಸ್ ಬಗ್ಗೆ ಅತಿಯಾದ ಕಾಳಜಿವಹಿಸುವ ವಿರಾಟ್ ಕೊಹ್ಲಿ ಮಾಂಸಾಹಾರವನ್ನೂ ತ್ಯಜಿಸಿ ವೀಗನ್ ಡಯಟ್ ಫಾಲೋ ಮಾಡುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ ಸಹ ಮಾಂಸಾಹಾರ ತ್ಯಜಿಸಿದ್ದಾರೆ. ಅನುಷ್ಕಾ ಶರ್ಮಾ ಸಹ ತಾವು ಈ ಹಿಂದೆ ಡ್ರಿಂಕ್ಸ್ ಮಾಡುತ್ತಿದ್ದಾಗಿಯೂ ಆ ನಂತರ ಮದ್ಯ ತ್ಯಜಿಸಿದ್ದಾಗಿಯೂ ಕಪಿಲ್ ಶರ್ಮಾ ಶೋನಲ್ಲಿ ಹೇಳಿಕೊಂಡಿದ್ದರು.
ಇದೀಗ ಮತ್ತೊಂದು ಐಪಿಎಲ್ ಸೀಸನ್ ಬಂದಿದ್ದು, ಹಲವು ವರ್ಷಗಳಿಂದ ಆರ್ಸಿಬಿ ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ ಈ ಬಾರಿಯೂ ಬೆಂಗಳೂರು ತಂಡಕ್ಕೆ ಕಪ್ ಗೆಲ್ಲಿಸಿಕೊಡಲು ಸೆಣೆಸಲಿದ್ದಾರೆ. ಇನ್ನು ನಟಿ ಅನುಷ್ಕಾ ಶರ್ಮಾ ಮಗು ಆದ ಬಳಿಕ ಮತ್ತೆ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು, ಅವರ ನಟನೆಯ ಚಾಕಡ್ ಎಕ್ಸ್ಪ್ರೆಸ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದ್ದ ಅನುಷ್ಕಾ ಶರ್ಮಾ ತಮ್ಮ ಸಂಸ್ಥೆಯನ್ನು ತಮ್ಮ ಸಹೋದರನಿಗೆ ಬಿಟ್ಟುಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Wed, 29 March 23