Ravi Kishan: ಮೀಟೂ ಅನುಭವ ಬಿಚ್ಚಿಟ್ಟ ನಟ, ಸಂಸದ ರವಿಕಿಶನ್
ಹಿರಿಯ ನಟ, ಸಂಸದರೂ ಆಗಿರವ ರವಿ ಕಿಶನ್ ತಾವು ಎದುರಿಸಿದ ಮೀ ಟೂ ಅನುಭವದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.
ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮೀ ಟೂ (Me Too) ಅಭಿಯಾನ ಇತ್ತೀಚೆಗೆ ತುಸು ತಣ್ಣಗಾಗಿದೆಯಾದರೂ ಆಗೊಮ್ಮೆ ಈಗೊಮ್ಮೆ ನಟಿಯರು ತಮಗೆ ಚಿತ್ರರಂಗದಲ್ಲಾದ ಕೆಟ್ಟ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಪಾತ್ರಕ್ಕಾಗಿ ಪಲ್ಲಂಗ ಅಥವಾ ಕಾಸ್ಟಿಂಗ್ ಕೌಚ್ ಅನುಭವಗಳನ್ನು ಹಂಚಿಕೊಂಡ ಬಹುತೇಕರಲ್ಲಿ ನಟಿಯರೇ ಹೆಚ್ಚು ಆದರೆ ಕೆಲವು ಪುರುಷರು ತಮಗೂ ಈ ಕೆಟ್ಟ ಅನುಭವ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಇದೀಗ ನಟ, ಹಾಗೂ ಬಿಜೆಪಿ ಸಂಸದರೂ ಆಗಿರುವ ರವಿ ಕಿಶನ್ (Ravi Kishan), ತಾವೂ ಸಹ ಕಾಸ್ಟಿಂಗ್ ಕೌಚ್ ಅನುಭವ ಎದುರಿಸಿದ್ದಾಗ ಶೋ ಒಂದರಲ್ಲಿ ಹೇಳಿಕೊಂಡಿದ್ದಾರೆ.
ಜನಪ್ರಿಯ ಜನ್ತಾ ಕಿ ಅದಾಲತ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ನಟ, ಸಂಸದ ರವಿ ಕಿಶನ್, ನಿರೂಪಕ ರಜತ್ ಮೆಹ್ತಾ ಪ್ರಶ್ನೆಗಳಿಗೆ ಉತ್ತರಿಸುತ್ತಾ ಚಿತ್ರರಂಗದಲ್ಲಿ ತಮ್ಮ ಆರಂಭದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅದೇ ಸಮಯದಲ್ಲಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಕಾಸ್ಟಿಂಗ್ ಕೌಚ್ ಘಟನೆಗಳು ಚಿತ್ರರಂಗದಲ್ಲಿ ಸಾಕಷ್ಟು ಆಗಿವೆ. ನನಗೂ ಆ ಅನುಭವ ಆಗಿತ್ತು, ಆದರೆ ನಾನು ಹೇಗೋ ಬಚಾವಾದೆ ಎಂದಿದ್ದಾರೆ. ಮುಂದುವರೆದು, ಚಿತ್ರರಂಗದ ಒಬ್ಬಾಕೆ ತಮ್ಮ ಬಳಿ ಮಾತನಾಡುತ್ತಾ, ‘ರಾತ್ರಿ ಕಾಫಿ ಕುಡಿಯಲು ಬನ್ನಿ’ ಎಂದಿದ್ದರಂತೆ. ಆದರೆ ರವಿ ಕಿಶನ್, ಆ ಮಹಿಳೆಯ ಉದ್ದೇಶ ಅರ್ಥ ಮಾಡಿಕೊಂಡು ಸುಮ್ಮನಾಗಿಬಿಟ್ಟರಂತೆ. ಆದರೆ ಆ ಮಹಿಳೆಯ ಹೆಸರು ಹೇಳಲು ನಿರಾಕರಿಸಿರುವ ರವಿ ಕಿಶನ್, ಆ ಮಹಿಳೆ ಈಗ ದೊಡ್ಡ ಹೆಸರು ಮಾಡಿಬಿಟ್ಟಿದ್ದಾರೆ ನಾನು ಆಕೆಯ ಹೆಸರು ಹೇಳಲಾರೆ ಎಂದಿದ್ದಾರೆ.
‘ನನ್ನ ತಂದೆ ಸದಾ ಹೇಳುತ್ತಿದ್ದರು. ನಿನ್ನ ಕೆಲಸವನ್ನು ಸದಾ ಪ್ರಾಮಾಣಿಕತೆಯಿಂದ ಮಾಡು, ಪರಿಶ್ರಮ ಪಟ್ಟು ಮಾತ್ರವೇ ಕೆಲಸ ಸಂಪಾದಿಸು ಎಂದು. ಹಾಗಾಗಿ ನಾನು ಯಾವುದೇ ಅಡ್ಡದಾರಿಗಳನ್ನು ಹಿಡಿಯಲು ಹೋಗಲಿಲ್ಲ. ನನಗೆ ಪ್ರತಿಭೆ ಇದೆ ಎಂದು ನನಗೆ ಗೊತ್ತಿತ್ತು, ಹಾಗಾಗಿ ನಾನು ನನ್ನ ಪ್ರತಿಭೆಯ ಮೇಲೆ ವಿಶ್ವಾಸವಿಟ್ಟೆ. ಅದರ ಮೂಲಕವೇ ಚಿತ್ರರಂಗದಲ್ಲಿ ಕೆಲಸ ಗಿಟ್ಟಿಸಿಕೊಂಡೆ” ಎಂದಿದ್ದಾರೆ ರವಿ ಕಿಶನ್.
ರವಿ ಕಿಶನ್, ಭೋಜ್ಪುರಿ ಚಿತ್ರರಂಗದ ಜನಪ್ರಿಯ ನಟ. ಮಾತ್ರವಲ್ಲದೆ ಹಲವು ಹಿಂದಿ ಹಾಗೂ ದಕ್ಷಿಣ ಭಾರತದ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ರಾಜಕಾರಣಿಯೂ ಆಗಿರುವ ರವಿ ಕಿಶನ್, ಉತ್ತರ ಪ್ರದೇಶದ ಗೋರಖ್ಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರೂ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:20 pm, Tue, 28 March 23