
ಮಲಯಾಳಂನ ‘ಹೆಲೆನ್’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿ ಜನರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ನಾಯಕಿಪ್ರಧಾನ ಕಥೆಯುಳ್ಳ ಆ ಚಿತ್ರವನ್ನು ಹಿಂದಿಯಲ್ಲಿ ‘ಮಿಲಿ’ (Mili Movie) ಎಂದು ರಿಮೇಕ್ ಮಾಡಲಾಗಿದೆ. ಜಾನ್ವಿ ಕಪೂರ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಬೋನಿ ಕಪೂರ್ ಅವರು ಮಗಳು ಜಾನ್ವಿಗಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ದೊಡ್ಡ ಗೆಲುವಿಗಾಗಿ ಜಾನ್ವಿ ಕಪೂರ್ (Janhvi Kapoor) ಕಾಯುತ್ತಿದ್ದಾರೆ. ಈ ಸಿನಿಮಾದಿಂದಲಾದರೂ ಯಶಸ್ಸು ಸಿಗಬಹುದು ಎಂಬ ನಿರೀಕ್ಷೆಯಲ್ಲೇ ಇಂದು (ನವೆಂಬರ್ 4) ‘ಮಿಲಿ’ ಬಿಡುಗಡೆ ಮಾಡಲಾಗಿದೆ. ಜಾನ್ವಿ ಕಪೂರ್ ಜೊತೆಗೆ ಸನ್ನಿ ಕೌಶಲ್ ಹಾಗೂ ಮನೋಜ್ ಪಾಹ್ವಾ ಅವರು ನಟಿಸಿದ್ದಾರೆ. ಮೊದಲ ದಿನ ಸಿನಿಮಾ ನೋಡಿಬಂದ ಪ್ರೇಕ್ಷಕರು ಟ್ವಿಟರ್ ಮೂಲಕ ತಮ್ಮ ವಿಮರ್ಶೆ (Mili Movie Twitter Review) ತಿಳಿಸುತ್ತಿದ್ದಾರೆ.
ಅದೇಕೋ ಗೊತ್ತಿಲ್ಲ ಜಾನ್ವಿ ಕಪೂರ್ ಅವರಿಗೆ ರಿಮೇಕ್ ಮೇಲೆ ಮೋಹ. ಬ್ಯಾಕ್ ಟು ಬ್ಯಾಕ್ ರಿಮೇಕ್ ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ದಕ್ಷಿಣದ ಕಥೆಯನ್ನು ಉತ್ತರ ಭಾರತದ ಪ್ರೇಕ್ಷಕರಿಗೆ ಪರಿಚಯಿಸಲು ಅವರು ಹೆಚ್ಚು ಉತ್ಸಾಹ ತೋರಿಸುತ್ತಾರೆ. ‘ಮಿಲಿ’ ಕೂಡ ರಿಮೇಕ್ ಸಿನಿಮಾ ಆಗಿರುವುದರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವರಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ.
ನಟನೆಯ ಕಾರಣದಿಂದ ಜಾನ್ವಿ ಕಪೂರ್ ಅವರು ಅನೇಕ ಬಾರಿ ಟೀಕೆಗೆ ಒಳಗಾಗಿದ್ದರು. ಆದರೆ ‘ಮಿಲಿ’ ಸಿನಿಮಾದಲ್ಲಿನ ಅವರ ನಟನೆಗೆ ಬಹುತೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೊದಲರ್ಧ ತುಂಬ ಚೆನ್ನಾಗಿದೆ. ದ್ವಿತೀಯಾರ್ಧದ ನಿರೂಪಣೆ ಒಂಚೂರು ನಿಧಾನಗತಿಯಲ್ಲಿ ಇದೆ ಎಂದು ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
ಇಡೀ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ಪಾತ್ರವೇ ಹೈಲೈಟ್ ಆಗಿದೆ. ಆ ದೃಷ್ಟಿಯಿಂದ ಇದು ಅವರಿಗೆ ಬೆಸ್ಟ್ ಆಯ್ಕೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಭಿನಯವನ್ನು ತೋರಿಸಲು ಈ ಪಾತ್ರ ಅವರಿಗೆ ಹೆಚ್ಚು ಅನುಕೂಲ ಆಗಿದೆ. ಒಂದೊಳ್ಳೆಯ ಥ್ರಿಲ್ ನೀಡುವ ಈ ಚಿತ್ರವನ್ನು ಒಮ್ಮೆಯಾದರೂ ನೋಡಬೇಕು ಎಂದು ಅಭಿಮಾನಿಗಳು ಅನಿಸಿಕೆ ಹಂಚಿಕೊಂಡಿದ್ದಾರೆ.
ಮಲಯಾಳಂನ ಮೂಲ ಸಿನಿಮಾವನ್ನು ನೋಡದೇ ಇರುವವರಿಗೆ ‘ಮಿಲಿ’ ಚಿತ್ರ ಹೆಚ್ಚು ಇಷ್ಟ ಆಗುತ್ತಿದೆ. ಫ್ರೀಜರ್ನಲ್ಲಿ ಸಿಕ್ಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಹೋರಾಡುವ ಯುವತಿಯ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಅಂತಿಮವಾಗಿ ಆಕೆಗೆ ಏನಾಗುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
ವಿಮರ್ಶೆಯ ದೃಷ್ಟಿಯಿಂದ ‘ಮಿಲಿ’ ಸಿನಿಮಾ ಗೆದ್ದಿದೆ. ಎಲ್ಲರೂ ಈ ಚಿತ್ರದ ಗುಣಮಟ್ಟವನ್ನು ಮತ್ತು ಜಾನ್ವಿ ಕಪೂರ್ ಅವರ ಅಭಿನಯವನ್ನು ಹೊಗಳಿದ್ದಾರೆ. ಒಟ್ಟಾರೆ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.