
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಮಿಷನ್ ಮಜ್ನು’ ಸಿನಿಮಾ (Mission Majnu Movie) ಥಿಯೇಟರ್ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಒಟಿಟಿ ಹಾದಿ ಹಿಡಿಯಿತು. ಈ ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಇಂದು (ಜ.20) ಬಹುನಿರೀಕ್ಷಿತ ‘ಮಿಷನ್ ಮಜ್ನು’ ಸಿನಿಮಾ ರಿಲೀಸ್ ಆಗಿದೆ. ಸ್ಪೈ-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಶಾಂತನು ಭಾಗ್ಚಿ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ನೋಡಿದ ಪ್ರೇಕ್ಷಕರು ಈ ಸಿನಿಮಾವನ್ನು ‘ರಾಜಿ’ ಚಿತ್ರಕ್ಕೆ ಹೋಲಿಸಿದ್ದರು. ಆದರೆ ಈಗ ಪೂರ್ತಿ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರ ಭಾವನೆ ಬದಲಾಗಿದೆ. ತಮ್ಮ ವಿಮರ್ಶೆ (Mission Majnu Review) ಏನು ಎಂಬುದನ್ನು ಟ್ವಿಟರ್ ಮೂಲಕ ಜನರು ತಿಳಿಸುತ್ತಿದ್ದಾರೆ.
ನೈಜ ಘಟನೆಗಳನ್ನು ಆಧರಿಸಿ ‘ಮಿಷನ್ ಮಜ್ನು’ ಚಿತ್ರ ಮೂಡಿಬಂದಿದೆ. ರೆಟ್ರೋ ಶೈಲಿಯ ಮೇಕಿಂಗ್ ಈ ಸಿನಿಮಾದಲ್ಲಿದೆ. ಸಿದ್ದಾರ್ಥ್ ಮಲ್ಹೋತ್ರ ಅವರ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅನೇಕರು ಇದನ್ನು ಮಾಸ್ಟರ್ ಪೀಸ್ ಎಂದು ಕರೆದಿದ್ದಾರೆ. ಅಷ್ಟರಮಟ್ಟಿಗೆ ಜನರಿಗೆ ಈ ಸಿನಿಮಾ ಇಷ್ಟ ಆಗಿದೆ. ಕೊನೆಯ ದೃಶ್ಯದವರೆಗೂ ಕೌತುಕಭರಿತವಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ವರ್ಷ ಬಾಲಿವುಡ್ ಸಿನಿಮಾಗಳಿಗೆ ಥಿಯೇಟರ್ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಆಗಲಿಲ್ಲ. ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಥ್ಯಾಂಕ್ ಗಾಡ್’ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಗುಡ್ ಬೈ’ ಚಿತ್ರ ಸೋತವು. ಅದರ ಪರಿಣಾಮವಾಗಿ ‘ಮಿಷನ್ ಮಜ್ನು’ ಚಿತ್ರತಂಡದವರು ಥಿಯೇಟರ್ ಸಹವಾಸ ಬೇಡ ಅಂತ ನೇರವಾಗಿ ಒಟಿಟಿಯಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಿದ್ದಾರೆ. ಒಂದು ವೇಳೆ ಚಿತ್ರಮಂದಿರದಲ್ಲಿ ರಿಲೀಸ್ ಆಗಿದ್ದರೆ ಸುಲಭವಾಗಿ 100 ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿತ್ತು ಎಂದು ಕೂಡ ಪ್ರೇಕ್ಷಕರು ಹೇಳುತ್ತಿದ್ದಾರೆ.
‘ಮಿಷನ್ ಮಜ್ನು’ ಚಿತ್ರದಲ್ಲಿ ದೇಶಭಕ್ತಿ ಕಥಾಹಂದರ ಇದೆ. ಗಣರಾಜ್ಯೋತ್ಸವಕ್ಕೆ ಕೆಲವೇ ದಿನ ಬಾಕಿ ಇರುವಾಗ ಈ ಸಿನಿಮಾ ರಿಲೀಸ್ ಆಗಿದ್ದು ಪ್ಲಸ್ ಪಾಯಿಂಟ್ ಆಗಿದೆ. ‘ಈ ಚಿತ್ರದಿಂದ 2023ರಲ್ಲಿ ಬಾಲಿವುಡ್ಗೆ ಉತ್ತಮ ಆರಂಭ ಆಗಿದೆ’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಎಲ್ಲ ಕಡೆಗಳಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಇದನ್ನೂ ಓದಿ: Rashmika Mandanna: ‘ಪುಷ್ಪ 2’ ಸಿನಿಮಾದ ಶೂಟಿಂಗ್ ಬಗ್ಗೆ ಅಪ್ಡೇಟ್ ನೀಡಿದ ನಟಿ ರಶ್ಮಿಕಾ ಮಂದಣ್ಣ
ಈ ಸಿನಿಮಾದಲ್ಲಿ ನಟಿಸಿದ ಎಲ್ಲ ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂಧ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅವರ ನಟನೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಈ ಸಿನಿಮಾದ ಯಶಸ್ಸಿನಿಂದ ಬಾಲಿವುಡ್ನಲ್ಲಿ ರಶ್ಮಿಕಾ ಅವರಿಗೆ ಇನ್ನಷ್ಟು ಒಳ್ಳೆಯ ಆಫರ್ಗಳು ಸಿಗಲಿವೆ. ಈಗ ಅವರು ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರಕ್ಕೆ ನಾಯಕಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.