ಭಾರತೀಯ ಕಿರುತೆರೆಯಲ್ಲಿ ‘ಶಕ್ತಿಮಾನ್’ (Shaktimaan) ಪಾತ್ರವನ್ನು ಮಾಡುವ ಮೂಲಕ ಜನಮನ ಗೆದ್ದ ಮುಖೇಶ್ ಖನ್ನಾ (Mukesh Khanna) ಅವರು ಈಗ ಅದೇ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಸಿನಿಮಾದಲ್ಲಿ ಯಾರು ಶಕ್ತಿಮಾನ್ ಪಾತ್ರ ಮಾಡುತ್ತಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಅಷ್ಟರಲ್ಲಾಗಲೇ ಕೆಲವು ಮಾಧ್ಯಮಗಳು ರಣವೀರ್ ಸಿಂಗ್ ಹೆಸರನ್ನು ಎಳೆದುತಂದಿವೆ. ಆದರೆ ಆ ಸುದ್ದಿ ಸುಳ್ಳು ಎಂದು ಮುಖೇಶ್ ಖನ್ನಾ ಸ್ಪಷ್ಟಪಡಿಸಿದ್ದಾರೆ. ತಾವು ಶಕ್ತಿಮಾನ್ ಪಾತ್ರಕ್ಕೆ ರಣವೀರ್ ಸಿಂಗ್ (Ranveer Singh) ಅವರನ್ನು ಆಯ್ಕೆ ಮಾಡಿಲ್ಲ ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.
‘ಶಕ್ತಿಮಾನ್ ಪಾತ್ರವನ್ನು ರಣವೀರ್ ಸಿಂಗ್ ಮಾಡುತ್ತಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಇತ್ತು. ಎಲ್ಲರೂ ಅದರಿಂದ ಕೋಪಗೊಂಡಿದ್ದರು. ನಾನು ಮೌನವಾಗಿದ್ದೆ. ಆದರೆ ಈ ಸಿನಿಮಾಗೆ ರಣವೀರ್ ಸಿಂಗ್ ಸಹಿ ಮಾಡಿದ್ದಾರೆ ಎಂದು ಟಿವಿ ವಾಹಿನಿಗಳು ಕೂಡ ಸುದ್ದಿ ಪ್ರಸಾರ ಮಾಡಲು ಶುರುಮಾಡಿದವು. ಆಗ ನಾನು ಮಾತನಾಡಬೇಕಾಯಿತು. ರಣವೀರ್ ಸಿಂಗ್ ಎಷ್ಟೇ ದೊಡ್ಡ ಸ್ಟಾರ್ ಆಗಿರಬಹುದು. ಆದರೆ ಇಂಥ ಇಮೇಜ್ ಇರುವ ವ್ಯಕ್ತಿ ಶಕ್ತಿಮಾನ್ ಆಗಲಾರ. ಮುಂದೇನಾಗುತ್ತೋ ನೋಡೋಣ’ ಎಂದಿದ್ದಾರೆ ಮುಖೇಶ್ ಖನ್ನಾ.
ಇದನ್ನೂ ಓದಿ: ‘ಶಕ್ತಿಮಾನ್’ ಸಿನಿಮಾ ಬಜೆಟ್ 300 ಕೋಟಿ ರೂಪಾಯಿ; ಕೆಲಸ ತಡ ಆಗಿದ್ದಕ್ಕೆ ಕಾರಣ ತಿಳಿಸಿದ ಮುಕೇಶ್ ಖನ್ನಾ
ರಣವೀರ್ ಸಿಂಗ್ ಬೇಡವೇ ಬೇಡ ಎಂದು ಮುಖೇಶ್ ಖನ್ನಾ ಅವರು ಹಠ ಹಿಡಿಯಲು ಕಾರಣ ಕೂಡ ಇದೆ. ಈ ಹಿಂದೆ ರಣವೀರ್ ಸಿಂಗ್ ಅವರು ಬೆತ್ತಲೆ ಫೋಟೋಶೂಟ್ ಮಾಡಿಸಿದ್ದರು. ಅದನ್ನು ಮುಖೇಶ್ ಖನ್ನಾ ಖಂಡಿಸಿದ್ದಾರೆ. ಈ ರೀತಿ ಬೆತ್ತಲೆಯಾಗಿ ನಟಿಸುವುದು ಭಾರತದ ಸಂಸ್ಕೃತಿ ಅಲ್ಲ ಎಂದು ಅವರು ಛಾಟಿ ಬೀಸಿದ್ದಾರೆ. ‘ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಅವರಿಗೆ ಸರಿ ಎನಿಸಿದರೆ ಅಂತಹ ದೇಶಕ್ಕೆ ಹೋಗಲಿ. ಅಲ್ಲಿ ಪ್ರತಿ ಮೂರನೇ ಒಂದು ದೃಶ್ಯದಲ್ಲಿ ಬೆತ್ತಲೆಯಾಗಿ ನಟಿಸಬಹುದು’ ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.
‘ನಿಮ್ಮ ಪೈಪೋಟಿ ಇರುವುದು ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್ ವಿರುದ್ಧ ಅಲ್ಲ ಎಂದು ನಾನು ನಿರ್ಮಾಪಕರಿಗೆ ಹೇಳಿದ್ದೇನೆ. ಶಕ್ತಿಮಾನ್ ಎಂದರೆ ಕೇವಲ ಸೂಪರ್ ಹೀರೋ ಮಾತ್ರ ಅಲ್ಲ. ಅವನು ಸೂಪರ್ ಟೀಚರ್ ಕೂಡ ಹೌದು. ಆ ಪಾತ್ರವನ್ನು ಮಾಡುವ ನಟನಿಗೆ ಅಂಥ ಗುಣ ಇರಬೇಕು. ಅವನು ಹೇಳಿದರೆ ಜನರು ಕೇಳುವಂತಿರಬೇಕು. ದೊಡ್ಡ ಸ್ಟಾರ್ಗಳು ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರ ಇಮೇಜ್ ಅಡ್ಡ ಬರುತ್ತದೆ’ ಎಂಬುದು ಮುಖೇಶ್ ಖನ್ನಾ ಅವರ ಅಭಿಪ್ರಾಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.