
ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿರುವ ‘ಜೈಲರ್ 2’ ಸಿನಿಮಾ ಬಿಡುಗಡೆ ಆಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕೆಲ ಕ್ಯಾಮಿಯೋಗಳು ಸಖತ್ ಹಿಟ್ ಆಗಿವೆ. ಮೋಹನ್ಲಾಲ್, ಶಿವರಾಜ್ ಕುಮಾರ್ ಜೊತೆಗೆ ಈ ಬಾರಿ ಹೃತಿಕ್ ರೋಷನ್ ಸಹ ನಟನೆ ಮಾಡಿದ್ದು, ಹೃತಿಕ್ ರೋಷನ್ ಅವರ ಎಂಟ್ರಿ ದೃಶ್ಯ ಸಖತ್ ವೈರಲ್ ಆಗಿದೆ. ‘ಜೈಲರ್ 2’ ಮೂಲಕ ಇದೇ ಮೊದಲ ಬಾರಿಗೆ ಹೃತಿಕ್ ರೋಷನ್ ಅವರು ದಕ್ಷಿಣದ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ‘ಜೈಲರ್ 2’ ಇಂದಾಗಿ ಹೃತಿಕ್ ಅವರ ಹೊಸ ಸಿನಿಮಾ ನಿರ್ದೇಶನ ಮಾಡುವ ಅವಕಾಶ ದಕ್ಷಿಣದ ನಿರ್ದೇಶಕರೊಬ್ಬರಿಗೆ ಒಲಿದಿದೆ ಎನ್ನಲಾಗಿದೆ.
ಹೃತಿಕ್ ರೋಷನ್, ಬಾಲಿವುಡ್ನ ‘ಸಂಪೂರ್ಣ ನಟ’. ಅದ್ಭುತ ಫಿಸೀಕ್, ಅತ್ಯದ್ಭುತ ಡ್ಯಾನ್ಸು ಹಾಗೂ ಅಷ್ಟೇ ಅದ್ಭುತವಾಗಿ ನಟನೆ ಮಾಡಬಲ್ಲರು ಹೃತಿಕ್ ರೋಷನ್. ಹಾಗಾಗಿ ಈ ನಟರೊಟ್ಟಿಗೆ ಕೆಲಸ ಮಾಡಲು ಹಲವು ನಿರ್ದೇಶಕರು ವರ್ಷಗಳ ಗಟ್ಟಲೆ ಕಾಯುತ್ತಾರೆ. ಆದರೆ ಇದೀಗ ಹೃತಿಕ್ ಅವರ ಹೊಸ ಸಿನಿಮಾ ನಿರ್ದೇಶಿಸುವ ಅವಕಾಶ ದಕ್ಷಿಣದ ನಿರ್ದೇಶಕನಿಗೆ ಧಕ್ಕಿದೆ. ತಮಿಳು ನಿರ್ದೇಶಕ ನೆಲ್ಸನ್ ದಿಲೀಪ್ ಅವರು ಹೃತಿಕ್ ಅವರ ಹೊಸ ಸಿನಿಮಾ ಅನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.
‘ಜೈಲರ್’ ಮತ್ತು ‘ಜೈಲರ್ 2’ ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡಿದ್ದಾರೆ. ‘ಜೈಲರ್ 2’ ಸಿನಿಮಾನಲ್ಲಿ ಹೃತಿಕ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನೆಲ್ಸನ್ ಅವರ ಕೆಲಸ ಮಾಡುವ ರೀತಿ ಹೃತಿಕ್ ಅವರಿಗೆ ಇಷ್ಟವಾಗಿದೆ ಎನ್ನಲಾಗುತ್ತಿದೆ. ಜೊತೆಗೆ ನೆಲ್ಸನ್ ಅವರು ಹೃತಿಕ್ ಅವರಿಗೆ ಕತೆಯೊಂದನ್ನು ಸಹ ಹೇಳಿದ್ದಾರಂತೆ. ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದು ಇನ್ನೂ ಖಚಿತವಾಗಿಲ್ಲವಾದರೂ, ಕತೆಯ ಬಗ್ಗೆ ಚರ್ಚೆಗಳು ನಡೆಯುತ್ತಿದೆಯಂತೆ.
ಇದನ್ನೂ ಓದಿ:‘ಜೈಲರ್ 2’ ವಿಮರ್ಶೆ: ಲಾಜಿಕ್ ಇಲ್ಲದೆಯೂ ರಜನಿಕಾಂತ್ ಅಭಿಮಾನಿಗಳಿಗೆ ಖುಷಿಕೊಡುವ ಸಿನಿಮಾ
ಹೃತಿಕ್ ರೋಷನ್ ಮತ್ತು ನೆಲ್ಸನ್ ಇಬ್ಬರೂ ಸಹ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೃತಿಕ್ ರೋಷನ್ ಇದೇ ಮೊದಲ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು, ಅವರು ‘ಕ್ರಿಶ್ 4’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆಗೆ ಅವರು ಸಿದ್ಧಾರ್ಥ್ ನಿರ್ದೇಶನದ ಹೊಸ ಸಿನಿಮಾ ಹಾಗೂ ಯಶ್ ರಾಜ್ ಫಿಲಮ್ಸ್ ನಿರ್ಮಾಣದ ಸಿನಿಮಾ ಒಂದರಲ್ಲಿ ಸಹ ನಟನೆ ಮಾಡಲಿದ್ದಾರೆ.
ಇನ್ನು ನೆಲ್ಸನ್, ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ನಟಿಸಲಿರುವ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅದಾದ ಬಳಿಕ ಅವರು ಜೂ ಎನ್ಟಿಆರ್ ನಟಿಸಲಿರುವ ತೆಲುಗು ಸಿನಿಮಾ ಅನ್ನು ಸಹ ನಿರ್ದೇಶಿಸಲಿದ್ದಾರೆ. ಇವುಗಳ ನಡುವೆ ಅವರು ಹೃತಿಕ್ ಅವರಿಗಾಗಿ ಸಿನಿಮಾ ಮಾಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ