‘ಜೈಲರ್ 2’ ವಿಮರ್ಶೆ: ಲಾಜಿಕ್ ಇಲ್ಲದೆಯೂ ರಜನಿಕಾಂತ್ ಅಭಿಮಾನಿಗಳಿಗೆ ಖುಷಿಕೊಡುವ ಸಿನಿಮಾ

ಜೈಲರ್ 2
- Time - 165 Minutes
- Released - October 15, 2026
- Language - Tamil
- Genre - Action, Thriller
ನಟ ರಜನಿಕಾಂತ್ ಅವರ ವೃತ್ತಿಜೀವನದ ಯಶಸ್ವಿ ಸಿನಿಮಾಗಳ ಪಟ್ಟಿಯಲ್ಲಿ ‘ಜೈಲರ್’ ಕೂಡ ಇದೆ. 2023ರಲ್ಲಿ ಬಿಡುಗಡೆ ಆಗಿದ್ದ ಆ ಸಿನಿಮಾದಲ್ಲಿ ರಜನಿಕಾಂತ್ ಅವರು ಮಾಜಿ ಜೈಲರ್ ಪಾತ್ರವನ್ನು ಮಾಡಿದ್ದರು. ಅಭಿಮಾನಿಗಳಿಗೆ ಈ ಚಿತ್ರ ಸಖತ್ ಇಷ್ಟ ಆಗಿತ್ತು. ಅದರ ಪರಿಣಾಮವಾಗಿ ‘ಜೈಲರ್ 2’ ಮಾಡಲು ತಂಡ ನಿರ್ಧರಿಸಿತ್ತು. ಶೀರ್ಷಿಕೆ ಮಾತ್ರವಲ್ಲದೇ, ಕಥೆ ಕೂಡ ಈ ಬಾರಿ ಮುಂದುವರಿದಿದೆ. ‘ಜೈಲರ್’ ಚಿತ್ರದ ಅಂತ್ಯದಲ್ಲಿ ವಿಲನ್ ವರ್ಮನ್ (ವಿನಾಯಕನ್) ಹತ್ಯೆ ಆಗಿತ್ತು. ಈಗ ‘ಜೈಲರ್ 2’ ಸಿನಿಮಾದ ಕಥೆ ಅಲ್ಲಿಂದಲೇ ಮುಂದುವರಿಯುತ್ತದೆ.
ವರ್ಮನ್ನ ಸಾಯಿಸಿದ್ದು ಯಾರು ಎಂದು ಆತನ ಸ್ನೇಹಿತ ದಿಲೀಪ್ (ಸೂರಜ್ ವೆಂಜರಮೂಡು) ಹುಡುಕಾಟ ನಡೆಸುತ್ತಾನೆ. ಆ ಹುಡುಕಾಟದಲ್ಲಿಯೇ ಇಡೀ ಮೊದಲಾರ್ಧದ ಕಥೆ ಸಾಗುತ್ತದೆ. ಟೈಗರ್ ಮುತ್ತುವೇಲ್ ಪಾಂಡಿಯನ್ (ರಜನಿಕಾಂತ್) ಹಾಗೂ ದಿಲೀಪ್ ಮುಖಾಮುಖಿ ಆಗುವ ವೇಳೆಗೆ ಮಧ್ಯಂತರ ಬರುತ್ತದೆ. ಆ ಬಳಿಕ ಹೀರೋ ಎದುರು ಖಳರ ದೊಡ್ಡ ಸಾಮ್ರಾಜ್ಯವೇ ಎದುರಾಗುತ್ತದೆ. ಈ ಬಾರಿ ಅವರನ್ನೆಲ್ಲ ಎದುರಿಸಿ, ಟೈಗರ್ ಮುತ್ತುವೇಲ್ ಪಾಂಡಿಯನ್ ತನ್ನ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದೇ ‘ಜೈಲರ್ 2’ ಕಥೆ.
‘ಜೈಲರ್ 2’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದೊಡ್ಡ ದಂಡು ಇದೆ. ರಜನಿಕಾಂತ್ ಜೊತೆ ಶಿವರಾಜ್ಕುಮಾರ್, ಮೋಹನ್ಲಾಲ್, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ರಮ್ಯಾ ಕೃಷ್ಣನ್, ಹೃತಿಕ್ ರೋಷನ್, ಜಾಕಿ ಶ್ರಾಫ್, ಮೇಘನಾ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಆ ಪಾತ್ರಗಳ ಕಾರಣದಿಂದಲೇ ‘ಜೈಲರ್ 2’ ಸಿನಿಮಾಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಗುಣ ಬಂದಿದೆ.
ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಸಿನಿಮಾದ ಮೊದಲಾರ್ಧದಲ್ಲಿ ಆ್ಯಕ್ಷನ್ ಜೊತೆಗೆ ಕಾಮಿಡಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ರಜನಿಕಾಂತ್, ಯೋಗಿಬಾಬು, ನಮೋ ನಾರಾಯಣ ಅವರ ಕಾಂಬಿನೇಷನ್ನ ದೃಶ್ಯಗಳು ಪ್ರೇಕ್ಷಕರಿಗೆ ಕಾಮಿಡಿ ಕಿಕ್ ನೀಡುತ್ತವೆ. ಹಾಸ್ಯದ ನಡುನಡುವೆಯೇ ಗನ್ಗಳ ಸದ್ದು ಹೆಚ್ಚುತ್ತದೆ. ಎಲ್ಲ ಪ್ರಮುಖ ಪಾತ್ರಗಳು ಕಥೆಯಲ್ಲಿ ಎಂಟ್ರಿ ಪಡೆದ ಬಳಿಕ ಈ ಸಿನಿಮಾ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ.
ಮೊದಲ ಪಾರ್ಟ್ ರೀತಿಯೇ ಈ ಬಾರಿ ಕೂಡ ಶಿವರಾಜ್ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್ ಅವರು ಆಪದ್ಬಾಂಧವರ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ ಎಂಥದ್ದೇ ಕಷ್ಟದಲ್ಲಿ ಇದ್ದರೂ ಈ ಮೂವರು ಬಂದು ಕಾಪಾಡುತ್ತಾರೆ ಎಂಬುದು ಗೊತ್ತಿರುವ ವಿಷಯ. ಹಾಗಾಗಿ ಇದು ಕಥೆಯ ಸಸ್ಪೆನ್ಸ್ ಅಂಶವನ್ನು ತುಸು ಕಡಿಮೆ ಮಾಡಿದೆ ಎನ್ನಬಹುದು. ಈ ಬಾರಿ ಹೃತಿಕ್ ರೋಷನ್ ಕೂಡ ಸೇರ್ಪಡೆ ಆಗಿದ್ದಾರೆ. ಸಖತ್ ಸ್ಟೈಲಿಶ್ ಆಗಿ ಅವರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಜೈಲರ್ 2’ ಶೂಟಿಂಗ್ ಸೆಟ್ನಲ್ಲಿ ರಜನಿಕಾಂತ್ ಎದುರು ನಡುಗಿದ್ದ ವಿದ್ಯಾ ಬಾಲನ್
ಈ ಸಿನಿಮಾದಲ್ಲಿ ಪ್ರೇಕ್ಷಕರು ಕಿಂಚಿತ್ತೂ ಲಾಜಿಕ್ ಹುಡುಕುವಂತಿಲ್ಲ. ಕಥಾನಾಯಕನನ್ನು ಹಾಗೂ ಆತನ ಸ್ನೇಹಿತರನ್ನು ಸರ್ವಶಕ್ತರು ಎಂಬಂತೆ ತೋರಿಸಲಾಗಿದೆ. ಏನನ್ನೂ ಪ್ರಶ್ನಿಸದೇ ಸ್ಟಾರ್ ನಟರ ಮೇಲಿನ ಅಭಿಮಾನಕ್ಕಾಗಿ ಸಿನಿಮಾ ನೋಡುವ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡೇ ನಿರ್ದೇಶಕ ನೆಲ್ಸನ್ ಅವರು ಈ ಕಥೆಯನ್ನು ಬರೆದಂತಿದೆ. ರಜನಿಕಾಂತ್ ಅವರನ್ನು ಆರಾಧಿಸುವ ಅಭಿಮಾನಿಗಳಿಗೆ ಈ ಚಿತ್ರ ರುಚಿಸುತ್ತದೆ.
‘ಜೈಲರ್ 2’ ಚಿತ್ರದಲ್ಲಿ ಅದ್ದೂರಿತನಕ್ಕೆ ಕೊರತೆ ಆಗಿಲ್ಲ. ಎಂದಿನಂತೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ತಮ್ಮ ಕೊಡುಗೆ ನೀಡಿದ್ದಾರೆ. ಕಥೆಯ ಬಗ್ಗೆ ನಿರ್ದೇಶಕ ನೆಲ್ಸನ್ ಅವರು ಇನ್ನಷ್ಟು ಗಮನ ಹರಿಸುವ ಅವಶ್ಯಕತೆ ಇತ್ತು. ಕಥೆಯಲ್ಲಿ ತುಂಬಾ ಹೊಸತನ ಕಾಣಿಸುತ್ತಿಲ್ಲ. ಅಬ್ಬಬ್ಬಾ ಎಂಬಂತಹ ಟ್ವಿಸ್ಟ್ಗಳು ಕೂಡ ಸಿನಿಮಾದಲ್ಲಿ ಇಲ್ಲದ ಕಾರಣ ಹಲವು ದೃಶ್ಯಗಳು ಸಪ್ಪೆ ಎನಿಸುತ್ತವೆ. ಚಿತ್ರದ ಅವಧಿಯನ್ನು ತಗ್ಗಿಸುವ ಸಾಧ್ಯತೆ ಕೂಡ ಇತ್ತು. ಆ ಅವಕಾಶವನ್ನು ನಿರ್ದೇಶಕರು ಕೈ ಚೆಲ್ಲಿದ್ದಾರೆ. ಕ್ಲೈಮ್ಯಾಕ್ಸ್ ವೇಳೆಗೆ ಫ್ಯಾಮಿಲಿ ಎಮೋಷನ್ಸ್ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:25 pm, Thu, 15 October 26




