Manoj Muntashir: ‘ಆದಿಪುರುಷ್​’ ಸಂಭಾಷಣೆಕಾರನ ಕ್ಷಮೆಗೆ ಬೆಲೆ ಇಲ್ಲ; ಸಂಬಳ ದಾನ ಮಾಡುವಂತೆ ಪಟ್ಟುಹಿಡಿದ ನೆಟ್ಟಿಗರು

Adipurush Movie: ‘ಆದಿಪುರುಷ್​’ ಚಿತ್ರದಿಂದ ಪಡೆದ ಸಂಭಾವನೆಯನ್ನು ಗೋಶಾಲೆ ಮತ್ತು ದೇವಸ್ಥಾನಕ್ಕೆ ದಾನ ನೀಡಬೇಕು ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಇವುಗಳಿಗೆ ಮನೋಜ್​ ಮುಂತಶಿರ್​​ ಇನ್ನಷ್ಟೇ ಉತ್ತರ ನೀಡಬೇಕಿದೆ.

Manoj Muntashir: ‘ಆದಿಪುರುಷ್​’ ಸಂಭಾಷಣೆಕಾರನ ಕ್ಷಮೆಗೆ ಬೆಲೆ ಇಲ್ಲ; ಸಂಬಳ ದಾನ ಮಾಡುವಂತೆ ಪಟ್ಟುಹಿಡಿದ ನೆಟ್ಟಿಗರು
‘ಆದಿಪುರುಷ್​’ ಸಿನಿಮಾ ಪೋಸ್ಟರ್​, ಮನೋಜ್​ ಮುಂತಶಿರ್​

Updated on: Jul 08, 2023 | 9:24 PM

ಧಾರ್ಮಿಕ ಗ್ರಂಥಗಳನ್ನು ಆಧರಿಸಿ ಸಿನಿಮಾ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಆದರೆ ‘ಆದಿಪುರುಷ್​’ (Adipurush) ತಂಡದವರು ಮನಬಂದಂತೆ ಸಿನಿಮಾ ಮಾಡಿ ಜನರಿಂದ ಟೀಕೆಗೆ ಒಳಗಾದರು. ರಾಮಾಯಣದ ಕಥೆಯನ್ನು ಆಧರಿಸಿದ ಈ ಸಿನಿಮಾದಲ್ಲಿ ಅಸಂಬದ್ಧಗಳೇ ತುಂಬಿವೆ ಎಂಬುದು ಬಹುಪಾಲು ಪ್ರೇಕ್ಷಕರ ಅಭಿಪ್ರಾಯ. ಈ ಚಿತ್ರದಲ್ಲಿ ಪ್ರಭಾಸ್​ (Prabhas) ಅವರು ರಾಮನಾಗಿ ಕಾಣಿಸಿಕೊಂಡರು. ಸೀತೆಯಾಗಿ ಕೃತಿ ಸನೋನ್​ ನಟಿಸಿದರು. ಇಂಥ ಸ್ಟಾರ್​ ಕಲಾವಿದರು ಇದ್ದರೂ ಕೂಡ ಸಿನಿಮಾ ಸೋತಿತು. ಅದಕ್ಕೆ ಕಾರಣ ಆಗಿದ್ದೇ ನಿರ್ದೇಶನ ತಂಡದ ಎಡವಟ್ಟುಗಳು. ಅದರಿಂದ ಜನರ ಭಾವನೆಗಳಿಗೆ ಧಕ್ಕೆ ಆಯಿತು. ಇಷ್ಟು ದಿನ ಕಳೆದ ಬಳಿಕ ಈ ಸಿನಿಮಾದ ಸಂಭಾಷಣೆಕಾರ ಮನೋಜ್​ ಮುಂತಶಿರ್ (Manoj Muntashir)​​ ಅವರು ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಆದರೆ ಅದನ್ನು ಒಂದು ವರ್ಗದ ಜನರು ಒಪ್ಪಿಕೊಂಡಿಲ್ಲ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

‘ಆದಿಪುರುಷ್​’ ಸಿನಿಮಾ ಬಿಡುಗಡೆ ಆದಾಗ ಸಖತ್​ ವಿರೋಧ ವ್ಯಕ್ತವಾಗಿತ್ತು. ಹನುಮಂತನ ಸಂಭಾಷಣೆಗಳು ಕಳಪೆ ಆಗಿವೆ ಎಂಬ ಆಕ್ಷೇಪ ಎದುರಾಯಿತು. ಆಗ ಡೈಲಾಗ್​ ರೈಟರ್​ ಮನೋಜ್​ ಮುಂತಶಿರ್​ ಅವರು ತಪ್ಪು ಒಪ್ಪಿಕೊಳ್ಳಬೇಕಿತ್ತು. ಆದರೆ ಆಗ ಅವರು ಉದ್ದಟತನ ಮೆರೆದಿದ್ದರು. ತಾವು ಮಾಡಿದ್ದೇ ಸರಿ ಎಂಬ ರೀತಿಯಲ್ಲಿ ಅವರು ವರ್ತಿಸಿದ್ದರು. ಅದು ಜನರ ಕೋಪಕ್ಕೆ ಕಾರಣ ಆಗಿತ್ತು. ‘ಆದಿಪುರುಷ್​’ ಬಿಡುಗಡೆಗೂ ಮುನ್ನ ‘ಇದು ರಾಮಾಯಣ ಆಧಾರಿತ ಸಿನಿಮಾ’ ಎಂದು ಹೇಳುತ್ತಿದ್ದ ಅವರು, ವಿವಾದ ಆದ ಬಳಿಕ ‘ನಾವು ರಾಮಾಯಣವನ್ನು ಇಟ್ಟುಕೊಂಡು ಸಿನಿಮಾ ಮಾಡಿಲ್ಲ, ಕೇವಲ ಅದರಿಂದ ಪ್ರೇರಿತವಾದ ಸಿನಿಮಾ ಇದು’ ಎಂದು ಬಣ್ಣ ಬದಲಾಯಿಸಿದ್ದರು.

ಇದನ್ನೂ ಓದಿ: Ramayan Serial: ಮತ್ತೆ ಟಿವಿಯಲ್ಲಿ ಪ್ರಸಾರ ಆಗಲಿದೆ ‘ರಾಮಾಯಣ’ ಧಾರಾವಾಹಿ; ‘ಆದಿಪುರುಷ್​ಗಿಂತ ಇದೇ ಉತ್ತಮ’ ಎಂದ ಪ್ರೇಕ್ಷಕರು

ಒಂದು ವೇಳೆ ಮನೋಜ್​ ಮುಂತಶಿರ್​ ಅವರು ಕ್ಷಮೆ ಕೇಳುವುದೇ ಹೌದಾಗಿದ್ದರೆ ‘ಆದಿಪುರುಷ್​’ ಬಿಡುಗಡೆ ಆದಾಗಲೇ ತಪ್ಪು ಒಪ್ಪಿಕೊಳ್ಳಬೇಕಿತ್ತು. ಈಗ ಎಲ್ಲ ಚಿತ್ರಮಂದಿರಗಳಿಂದ ಸಿನಿಮಾ ಎತ್ತಂಗಡಿ ಆದ ಮೇಲೆ ಕ್ಷಮೆ ಕೇಳಲು ಬಂದಿರುವುದು ಅನೇಕರಿಗೆ ಸರಿ ಎನಿಸಿಲ್ಲ. ಹಾಗಾಗಿ ಅವರ ಕ್ಷಮೆಯನ್ನು ಬಹುತೇಕರು ಒಪ್ಪಿಕೊಂಡಿಲ್ಲ. ಅಲ್ಲದೇ, ಬರೀ ಬಾಯಿ ಮಾತಿನಲ್ಲಿ ಕ್ಷಮೆ ಕೇಳಿದರೆ ಏನು ಪ್ರಯೋಜನ? ‘ಆದಿಪುರುಷ್​’ ಚಿತ್ರದಿಂದ ಪಡೆದ ಸಂಭಾವನೆಯನ್ನು ಗೋಶಾಲೆ ಮತ್ತು ದೇವಸ್ಥಾನಕ್ಕೆ ದಾನ ನೀಡಬೇಕು ಎಂದು ಕೂಡ ಅನೇಕರು ಕಮೆಂಟ್​ ಮಾಡಿದ್ದಾರೆ. ಇವುಗಳಿಗೆ ಮನೋಜ್​ ಮುಂತಶೀರ್​ ಇನ್ನಷ್ಟೇ ಉತ್ತರ ನೀಡಬೇಕಿದೆ.

ಮನೋಜ್​ ಮುಂತಶಿರ್​ ಟ್ವೀಟ್​ನಲ್ಲಿ ಏನಿದೆ?

‘ಆದಿಪುರುಷ್​ ಚಿತ್ರದಿಂದ ಜನರ ಭಾವನೆಗೆ ಧಕ್ಕೆ ಆಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಕೈಮುಗಿದು ನಾನು ಕ್ಷಮೆ ಕೇಳುತ್ತೇನೆ. ನಾವೆಲ್ಲರೂ ಒಂದಾಗಿ ಸನಾತನ ಧರ್ಮ ಮತ್ತು ಈ ದೇಶದ ಸೇವೆ ಮಾಡುವಂತೆ ಬಜರಂಗ ಬಲಿ ಶಕ್ತಿ ನೀಡಲಿ’ ಎಂದು ಮನೋಜ್​ ಮುಂತಶಿರ್​ ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us