Ramayan Serial: ಮತ್ತೆ ಟಿವಿಯಲ್ಲಿ ಪ್ರಸಾರ ಆಗಲಿದೆ ‘ರಾಮಾಯಣ’ ಧಾರಾವಾಹಿ; ‘ಆದಿಪುರುಷ್ಗಿಂತ ಇದೇ ಉತ್ತಮ’ ಎಂದ ಪ್ರೇಕ್ಷಕರು
Ramanand Sagar: ರಮಾನಂದ್ ಸಾಗರ್ ನಿರ್ದೇಶನ ಮಾಡಿದ್ದ ‘ರಾಮಾಯಣ’ ಸೀರಿಯಲ್ 1987ರಲ್ಲಿ ಪ್ರಸಾರ ಕಂಡಿತ್ತು. ‘ದೂರದರ್ಶನ’ ವಾಹಿನಿ ಮೂಲಕ ಬಿತ್ತರವಾದ ಈ ಧಾರಾವಾಹಿಯನ್ನು ಜನರು ಈಗಲೂ ಹೊಗಳುತ್ತಾರೆ.
ಪ್ರಭಾಸ್ ನಟನೆಯ ‘ಆದಿಪುರುಷ್’ (Adipurush) ಸಿನಿಮಾದಿಂದ ಸಾಕಷ್ಟು ವಿವಾದ ಸೃಷ್ಟಿ ಆಯಿತು. ಈ ಚಿತ್ರವನ್ನು ಹೊಗಳಿದ್ದಕ್ಕಿಂತ ತೆಗಳಿದವರೇ ಹೆಚ್ಚು. ರಾಮಾಯಣವನ್ನು ಆಧಾರವಾಗಿ ಇಟ್ಟುಕೊಂಡು ಈ ಚಿತ್ರ ಮೂಡಿಬಂದಿತ್ತು. ಆದರೆ ರಾಮಾಯಣದ ಕಥೆಯನ್ನು ಮನಬಂದಂತೆ ತೆರೆಗೆ ತರಲಾಗಿದೆ ಎಂಬುದು ಪ್ರೇಕ್ಷಕರ ಆರೋಪ. ಪ್ರಭಾಸ್ (Prabhas) ಅವರು ಮಾಡಿದ ರಾಮನ ಪಾತ್ರ ಹಾಗೂ ಸೈಫ್ ಅಲಿ ಖಾನ್ ಮಾಡಿದ ರಾವಣನ ಪಾತ್ರದ ಬಗ್ಗೆ ಜನರಿಂದ ಭಾರಿ ಅಸಮಾಧಾನ ವ್ಯಕ್ತವಾಯಿತು. ಆಂಜನೇಯನ ಪಾತ್ರದ ಸಂಭಾಷಣೆಗಳಿಗೂ ಆಕ್ಷೇಪ ಎದುರಾಯಿತು. ‘ಈ ಸಿನಿಮಾಗಿಂತ ಹಳೇ ಕಾಲದ ರಾಮಾಯಣ ಧಾರಾವಾಹಿಯೇ ಎಷ್ಟೋ ಉತ್ತಮ’ ಎಂದು ಪ್ರೇಕ್ಷಕರು ಅನಿಸಿಕೆ ಹಂಚಿಕೊಂಡರು. ಹಾಗಾಗಿ ಮತ್ತೆ ಟಿವಿಯಲ್ಲಿ ‘ರಾಮಾಯಣ’ ಸೀರಿಯಲ್ (Ramayana Serial) ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಕೊವಿಡ್ ಲಾಕ್ಡೌನ್ ಸಂದರ್ಭದಲ್ಲಿ ಹಳೇ ಸೀರಿಯಲ್ಗಳನ್ನು ಮತ್ತೆ ಪ್ರಸಾರ ಮಾಡಲಾಗಿತ್ತು. ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿತ್ತರಿಸಲಾಗಿತ್ತು. ಆಗ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಒಳ್ಳೆಯ ಟಿಆರ್ಪಿ ಬಂದಿತ್ತು. ಈಗ ‘ರಾಮಾಯಣ’ ಧಾರಾವಾಹಿಯ ಮರುಪ್ರಸಾರಕ್ಕೆ ‘ಶೆಮರೂ ಟಿವಿ’ ಮುಂದಾಗಿದೆ. ಜುಲೈ 3ರಿಂದ ಈ ಸೀರಿಯಲ್ ಸಂಚಿಕೆಗಳು ರಾತ್ರಿ 7.30ಕ್ಕೆ ಪ್ರಸಾರ ಆಗಲಿವೆ. ವೀಕ್ಷಕರಿಂದ ಯಾವ ರೀತಿ ರೆಸ್ಪಾನ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Arun Govil: ರಾಮನ ಪಾತ್ರ ಮಾಡಿದ್ದ ನಟನ ಕಾಲಿಗೆ ಬಿದ್ದು ಮಗುವನ್ನು ಉಳಿಸುವಂತೆ ಬೇಡಿಕೊಂಡಿದ್ದ ಮಹಿಳೆ: ನಂತರ ಆಗಿದ್ದೇನು?
ರಮಾನಂದ್ ಸಾಗರ್ ಅವರು ನಿರ್ದೇಶನ ಮಾಡಿದ್ದ ‘ರಾಮಾಯಣ’ ಧಾರಾವಾಹಿ 1987ರಲ್ಲಿ ಪ್ರಸಾರ ಕಂಡಿತ್ತು. ‘ದೂರದರ್ಶನ’ ವಾಹಿನಿ ಮೂಲಕ ಬಿತ್ತರವಾದ ಈ ಧಾರಾವಾಹಿಯನ್ನು ಜನರು ಈಗಲೂ ಮೆಚ್ಚಿಕೊಳ್ಳುತ್ತಾರೆ. ಪೌರಾಣಿಕ ಕಥೆಯನ್ನು ತುಂಬ ಅಚ್ಚುಕಟ್ಟಾಗಿ ಜನರ ಮುಂದಿರಿಸಿದ ಸೀರಿಯಲ್ ಎಂದು ಎಲ್ಲರೂ ಹೊಗಳುತ್ತಾರೆ. ‘ಆದಿಪುರುಷ್’ ಸಿನಿಮಾಗೆ ಟೀಕೆ ಎದುರಾದ ಹಿನ್ನೆಲೆಯಲ್ಲಿ ಹಳೇ ರಾಮಾಯಣ ಸೀರಿಯಲ್ನ ಬಗ್ಗೆ ಜನರು ಮತ್ತೆ ಮಾತನಾಡಲು ಆರಂಭಿಸಿದ್ದಾರೆ.
ಇದನ್ನೂ ಓದಿ: Ramayan: ಮತ್ತೆ ರಾಮಾಯಣ, ಮಹಾಭಾರತದ ಕಥೆ ಇಟ್ಟುಕೊಂಡ ಸಿನಿಮಾ ಮಾಡುವ ಧೈರ್ಯ ಯಾರಿಗಿದೆ?
‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರವನ್ನು ಅರುಣ್ ಗೋವಿಲ್ ಮಾಡಿದ್ದರು. ಸೀತೆಯಾಗಿ ದೀಪಿಕಾ ಚಿಖ್ಲಿಯಾ ನಟಿಸಿದ್ದರು. ಆಂಜನೇಯನಾಗಿ ಧಾರ ಸಿಂಗ್ ಅಭಿನಯಿಸಿದ್ದರು. ಆ ಪಾತ್ರಗಳನ್ನು ವೀಕ್ಷಕರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಜನರು ಈ ಸೀರಿಯಲ್ ಅನ್ನು ಬಹಳ ಭಕ್ತಿ ಭಾವದಿಂದ ವೀಕ್ಷಿಸಿದ್ದರು. ರಾಮ-ಸೀತೆಯ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಖ್ಲಿಯಾ ಅವರಿಗೆ ಜನರು ತುಂಬ ಗೌರವ ನೀಡುತ್ತಿದ್ದರು. ಆದರೆ ‘ಆದಿಪುರುಷ್’ ಚಿತ್ರತಂಡದವರು ಟ್ರೋಲ್ ಆಗುವ ರೀತಿಯಲ್ಲಿ ಸಿನಿಮಾ ಮಾಡಿದ್ದು ವಿಪರ್ಯಾಸ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.