
ಇಂದು (ಸೆಪ್ಟೆಂಬರ್ 17) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹುಟ್ಟುಹಬ್ಬ. ರಾಜಕೀಯ ಮುಖಂಡರು, ಸಚಿವರುಗಳು, ವಿಪಕ್ಷ ನಾಯಕರು, ಸಿನಿಮಾ ಸೆಲೆಬ್ರಿಟಿಗಳು, ಕ್ರೀಡಾ ತಾರೆಯರು, ಉದ್ಯಮಿಗಳು ಪ್ರಧಾನಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಹಲವಾರು ಮಂದಿ ಸೆಲೆಬ್ರಿಟಿಗಳು ಮೋದಿ ಜೊತೆಗಿನ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ. ಇದರ ನಡುವೆ ಮೋದಿ ಅವರ ಅಭಿಮಾನಿ, ಸಿನಿಮಾ ಸಾಹಿತಿ ಪ್ರಸೂನ್ ಜೋಶಿ ಅವರು ಮೋದಿ ಅವರ ಗುಣಗಾನ ಮಾಡಿ ಹಾಡೊಂದನ್ನು ರಚಿಸಿದ್ದು, ಶಂಕರ್ ಮಹದೇವ್ ಹಾಡು ಹಾಡಿದ್ದಾರೆ. ಮೋದಿ ಅವರ ಹುಟ್ಟುಹಬ್ಬದ ವಿಶೇಷವಾಗಿ ಹಾಡನ್ನು ಬಿಡುಗಡೆ ಮಾಡಲಾಗಿದೆ.
ಮೋದಿ ಅವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ವಂದನೀಯ ಹೇ ದೇಶ್ ಮೇರ’ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. ಹಾಡಿಗೆ ಸಾಹಿತ್ಯವನ್ನು ಪ್ರಸೂನ್ ಜೋಶಿ ಬರೆದಿದ್ದಾರೆ. ಹಾಡು ಹಾಡಿರುವುದು ಶಂಕರ್ ಮಹದೇವನ್, ಸಂಗೀತ ನೀಡಿರುವುದು ಸಹ ಶಂಕರ್ ಮಹದೆವನ್ ಅವರೇ, ಹಾಡು ಟಿ-ಸೀರೀಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದೆ. ನರೇಂದ್ರ ಮೋದಿ ಅವರ ಸಾಧನೆಗಳನ್ನು, ವ್ಯಕ್ತಿತ್ವವನ್ನು ಹಾಡಿನಲ್ಲಿ ಕೊಂಡಾಡಲಾಗಿದೆ.
ಹಾಡಿನಲ್ಲಿ ಮೋದಿ ಅವರ ಹಲವು ವಿಡಿಯೋ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ಇತ್ತೀಚೆಗೆ ನಡೆಸಲಾದ ಆಪರೇಷನ್ ಸಿಂಧೂರ್ ವಿಡಿಯೋಗಳು, ಮೋದಿ ಅವರ ಭಾಷಣದ ವಿಡಿಯೋ ತುಣುಕುಗಳು, ಸೈನ್ಯದ ಪಥಸಂಚಲನದ ದೃಶ್ಯಗಳು, ರಾಮ ಮಂದಿರದ ವಿಡಿಯೋ, ಮೋದಿ ಅವರ ವಿದೇಶ ಪ್ರವಾಸದ ವಿಡಿಯೋ ತುಣುಕುಗಳು ಇನ್ನೂ ಕೆಲವು ವಿಡಿಯೋ ತುಣುಕುಗಳನ್ನು ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.
ಇದನ್ನೂ ಓದಿ:ಜಪಾನೀ ಉದ್ದಿಮೆಗಳಿಗೆ ಗ್ಲೋಬಲ್ ಸೌತ್ ತಲುಪಲು ಭಾರತ ಸ್ಪ್ರಿಂಗ್ಬೋರ್ಡ್ ಇದ್ದಂತೆ: ನರೇಂದ್ರ ಮೋದಿ
ಮೋದಿ ಅವರಿಂದ ಭಾರತೀಯರು ಮತ್ತೆ ಸ್ವಾಭಿಮಾನಿಗಳಾಗಿದ್ದಾರೆ. ವಿಶ್ವದಲ್ಲೇ ದೇಶವನ್ನು ಎತ್ತರಕ್ಕೆ ಏರಿಸಿದ್ದಾರೆ. ಆಕ್ರಮಣಕಾರರಿಗೆ ತಕ್ಕ ಪಾಠ ಕಲಿಸಿದ್ದಾರೆ ಇನ್ನೂ ಹಲವು ಸಾಲುಗಳನ್ನು ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಟಾಯ್ಲೆಟ್ ನಿರ್ಮಾಣ, ಉಜ್ವಲ ಯೋಜನೆ, ಸ್ವಚ್ಛ ಭಾರತ್ ಯೋಜನೆ ಇನ್ನೂ ಹಲವು ಯೋಜನೆಗಳ ಉಲ್ಲೇಖ ಮಾಡಲಾಗಿದ್ದು, ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ. 3:35 ನಿಮಿಷದ ಹಾಡು ಸೆಪ್ಟೆಂಬರ್ 17ರಂದು ಬಿಡುಗಡೆ ಆಗಿದ್ದು ಒಂದು ಗಂಟೆಗಳಲ್ಲಿ 2500ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 500ಕ್ಕೂ ಮಂದಿ ಲೈಕ್ ಸಹ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 am, Wed, 17 September 25