ರಜನೀಶ್ ದುಗ್ಗಲ್ (Rajneesh Duggal) ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ‘ಮಿಸ್ಟರ್ ಇಂಡಿಯಾ’ ಹಾಗೂ ಮಿಸ್ಟರ್ ಇಂಟರ್ನ್ಯಾಷನ್’ ಆಗಿ ಗಮನ ಸೆಳೆದಿದ್ದರು. ಅವರು 2005ರಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ‘ಯಕೀನ್’ ಸಿನಿಮಾ ಮಾಡಬೇಕಿತ್ತು. ಆದರೆ, ಅವರಿಗೆ ಸಿಕ್ಕ ಸಿನಿಮಾ ಆಫರ್ ಪ್ರಿಯಾಂಕಾ ಚೋಪ್ರಾ ವರ್ತನೆಯಿಂದ ಕೈ ತಪ್ಪಿತು. ಈ ಬಗ್ಗೆ ಅವರು ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಸಿದ್ದಾರ್ಥ್ ಕಣ್ಣನ್ ಜೊತೆ ನಡೆದ ಸಂದರ್ಶನದಲ್ಲಿ ರಜನೀಶ್ ಈ ಬಗ್ಗೆ ಮಾತನಾಡಿದ್ದಾರೆ. ಹೊಸಬರ ಜೊತೆ ಸಿನಿಮಾ ಮಾಡಲ್ಲ ಎಂದು ಪ್ರಿಯಾಂಕಾ ಹೇಳಿದ್ದರು. ಹೀಗಾಗಿ, ನಿರ್ಮಾಪಕರು ರಜನೀಶ್ ಬದಲು ಬೇರೆಯವರನ್ನು ಆಯ್ಕೆ ಮಾಡಿಕೊಂಡಿದ್ದರು. ‘ಯಕೀನ್ ಚಿತ್ರಕ್ಕೆ ನಾನು ಮೊದಲ ಆಯ್ಕೆ ಆಗಿದ್ದೆ. ನಾನು ಈ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದೆ. ನನ್ನೂರಿನಿಂದ ಮುಂಬೈ ಶಿಫ್ಟ್ ಆದೆ. ನಿರ್ಮಾಪಕರು ನನ್ನ ಜೊತೆ ಮೂರು ಸಿನಿಮಾಗಳ ಡೀಲ್ ಮಾಡಿಕೊಂಡಿದ್ದರು. ಯಕೀನ್ ಸಿನಿಮಾದಲ್ಲಿ ಪ್ರಿಯಾಂಕಾ ಜೊತೆ ನಾನು ನಟಿಸಬೇಕಿತ್ತು. ನನಗೆ ನಿರ್ಮಾಪಕರು ಜುಹುನಲ್ಲಿ ಪೆಂಟ್ಹೌಸ್ ನೀಡಿದ್ದರು. ಓಡಾಡೋಕೆ ಕಾರು ಹಾಗೂ ಅದಕ್ಕೆ ಡ್ರೈವರ್ ಕೂಡ ಕೊಟ್ಟಿದ್ದರು. ನಿತ್ಯವೂ ನನ್ನ ಫ್ಲ್ಯಾಟ್ಗೆ ಊಟ ಬರುತ್ತಿತ್ತು. ನಾನು ನಟನೆಯ ಬಗ್ಗೆ ಮಾತ್ರ ಗಮನ ಹರಿಸಿದೆ. ಆಗ ಬಂದ ಹಲವು ಜಾಹೀರಾತುಗಳನ್ನು ಕೈ ಬಿಟ್ಟೆ’ ಎಂದಿದ್ದಾರೆ ರಜನೀಶ್.
‘ಒಂದು ದಿನ ನಿರ್ಮಾಪಕ ಸುಜಿತ್ ಕುಮಾರ್ ಸಿಂಗ್ ನನ್ನನ್ನು ಕರೆದರು. ಪ್ರಿಯಾಂಕಾ ಚೋಪ್ರಾ ಹೊಸಬರ ಜೊತೆ ನಟಿಸಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದರು. ನೀವು ನನ್ನ ಮೇಲೆ ಸಾಕಷ್ಟು ಹಣ ಸುರಿದಿದ್ದೀರಲ್ಲ, ನಟಿಯನ್ನು ಬದಲಾಯಿಸಿ ಎಂದು ನಿರ್ಮಾಪಕರಿಗೆ ಹೇಳಿದೆ. ಸಿನಿಮಾ ಬಿಸ್ನೆಸ್ ಹೇಗೆ ನಡೆಯುತ್ತದೆ ಎನ್ನುವುದರ ಅರಿವು ನನಗೆ ಇರಲಿಲ್ಲ. ಪ್ರಿಯಾಂಕಾ ನಿರ್ಧಾರ ತಪ್ಪು ಎನ್ನುವುದಿಲ್ಲ. ಆದರೆ, ಅವರು ನನ್ನ ಜೊತೆ ನಟಿಸುತ್ತೇನೆ ಎನ್ನಬೇಕಿತ್ತು’ ಎಂದಿದ್ದಾರೆ ರಜನೀಶ್.
ಇದನ್ನೂ ಓದಿ: ಶಾರುಖ್ ಖಾನ್ ಅವರು ಒಂದುಸಲಕ್ಕೆ ಎಷ್ಟು ಸಿಗರೇಟು ಸೇದುತ್ತಾರೆ ಗೊತ್ತಾ?
ಆ ಬಳಿಕ ರಜನೀಶ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಮೂರು ವರ್ಷ ವಿಳಂಬ ಆಯಿತು. 2008ರಲ್ಲಿ ರಿಲೀಸ್ ಆದ ‘1920’ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರಿಗೆ ಹೇಳಿಕೊಳ್ಳುವಂಥ ಗೆಲುವು ನಂತರ ಸಿಗಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Mon, 27 May 24