
ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಮುಂಬೈ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಅವರು ನೀಡಿದ್ದ ದೂರಿನ ಅನ್ವಯ ರಾಖಿ ಸಾವಂತ್ ಅವರ ಬಂಧನ ಆಗಿದೆ ಎಂದು ವರದಿ ಆಗಿದೆ. ಈ ವಿಚಾರವನ್ನು ಶೆರ್ಲಿನ್ ಚೋಪ್ರಾ ಅವರು ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. ರಾಖಿ ಸಾವಂತ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ಕೂಡ ಶೆರ್ಲಿನ್ ಚೋಪ್ರಾ ಟ್ವೀಟ್ ಮಾಡಿದ್ದಾರೆ. ರಾಖಿ ಸಾವಂತ್ ಅವರ ವೈಯಕ್ತಿಕ ಬದುಕಿನಲ್ಲಿ ಅನೇಕ ವಿವಾದಗಳು ಎದುರಾಗುತ್ತಿವೆ. ಆದಿಲ್ ಖಾನ್ ಜೊತೆಗಿನ ಮದುವೆ ಕುರಿತಂತೆ ಅವರು ಇತ್ತೀಚೆಗೆ ಕಣ್ಣೀರು ಹಾಕಿದ್ದರು. ಇನ್ನೇನು ಎಲ್ಲವೂ ಸರಿ ಆಯಿತು ಎನ್ನುವಾಗಲೇ ಅವರ ಬಂಧನವಾಗಿದೆ.
ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ಶೆರ್ಲಿನ್ ಚೋಪ್ರಾ ಅವರು ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಹಾಗೆಯೇ ಅವರು ಈ ಹಿಂದೆ ನಿರ್ದೇಶಕ ಸಾಜಿದ್ ಖಾನ್ ಮೇಲೆ ಮೀ ಟೂ ಆರೋಪ ಹೊರಿಸಿದ್ದರು. ಸಾಜಿದ್ ಖಾನ್ ಅವರನ್ನು ಸಲ್ಮಾನ್ ಖಾನ್ ರಕ್ಷಿಸುತ್ತಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದರು. ಈ ವಿಚಾರದಲ್ಲಿ ತಲೆ ಹಾಕಿದ್ದ ರಾಖಿ ಸಾವಂತ್ ಅವರು ಶೆರ್ಲಿನ್ ವಿರುದ್ಧ ಮಾತನಾಡಿದ್ದರು. ಆಗ ರಾಖಿ ವಿರುದ್ಧ ಶೆರ್ಲಿನಾ ಚೋಪ್ರಾ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದನ್ನೂ ಓದಿ: Rakhi Sawant Marriage: ರಾಖಿ ಸಾವಂತ್ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್
ನಟಿ ರಾಖಿ ಸಾವಂತ್ ಅವರು ಪ್ರಿಯಕರ ಆದಿಲ್ ಖಾನ್ ಜೊತೆ ಮದುವೆ ಆಗಿರುವ ವಿಚಾರ ಇತ್ತೀಚೆಗೆ ಬಹಿರಂಗ ಆಯಿತು. ಲೇಟೆಸ್ಟ್ ನ್ಯೂಸ್ ಏನೆಂದರೆ ಪತಿ ಜೊತೆ ಸೇರಿ ಅವರು ಒಂದು ಡ್ಯಾನ್ಸ್ ಅಕಾಡೆಮಿ ಶುರು ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಜ.19ರ ಮಧ್ಯಾಹ್ನ 3 ಗಂಟೆ ಅದು ಉದ್ಘಾಟನೆಗೊಳ್ಳಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಅವರ ಬಂಧನ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:44 pm, Thu, 19 January 23