ನಟಿ ರಾಖಿ ಸಾವಂತ್ (Rakhi Sawant) ಅವರದ್ದು ವಿಚಿತ್ರ ವ್ಯಕ್ತಿತ್ವ. ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಬಿಗ್ ಬಾಸ್ (Bigg Boss) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ಅವರಿಗೆ ಒಡನಾಟ ಬೆಳೆಯಿತು. ಪಾಪರಾಜಿಗಳು ಅವರ ಹಿಂದೆ ಬೀಳುವುದು ಕೂಡ ಹೆಚ್ಚಾಯಿತು. ರಾಖಿ ಸಾವಂತ್ ಅವರ ಖಾಸಗಿ ಜೀವನ ಅಷ್ಟೇನೂ ಖುಷಿಯಾಗಿ ಉಳಿದುಕೊಂಡಿಲ್ಲ. ರಿತೇಶ್ ಎಂಬ ವ್ಯಕ್ತಿಯ ಜೊತೆ ಅವರು ಮದುವೆ ಮಾಡಿಕೊಂಡಿದ್ದರು. ಆದರೆ ಆ ಮದುವೆ ಕೆಲವೇ ದಿನಗಳಲ್ಲೇ ಮುರಿದು ಬಿತ್ತು. ಈಗ ರಿತೇಶ್ನಿಂದಾಗಿ ರಾಖಿ ಸಾವಂತ್ ಸಿಕ್ಕಾಪಟ್ಟೆ ಕಷ್ಟ ಅನುಭವಿಸುತ್ತಿದ್ದಾರೆ. ಮಾಜಿ ಗಂಡನ ಕಿರುಕುಳ ತಾಳಲಾರದೇ ಅವರೀಗ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ರಾಖಿ ಸಾವಂತ್ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ (Hacking) ಮಾಡಲಾಗಿದೆ. ಇದು ಮಾಜಿ ಗಂಡನ ಕೆಲಸ ಎಂದು ಅವರು ಆರೋಪಿಸಿದ್ದಾರೆ.
ಸೆಲೆಬ್ರಿಟಿಗಳಿಗೆ ಸೋಶಿಯಲ್ ಮೀಡಿಯಾ ತುಂಬ ಮುಖ್ಯ. ಆ ಮೂಲಕ ಅವರು ಹಣ ಸಂಪಾದಿಸುತ್ತಾರೆ. ಪ್ರಚಾರಕ್ಕಾಗಿ, ಅಭಿಮಾನಿಗಳ ಜೊತೆ ಸಂಪರ್ಕಕ್ಕಾಗಿ ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟರ್ ಮುಂತಾದ ಖಾತೆಗಳಲ್ಲಿ ಸಕ್ರಿಯವಾಗಿ ಇರುತ್ತಾರೆ. ರಾಖಿ ಸಾವಂತ್ ಅವರ ಎಲ್ಲ ಸೋಶಿಯಲ್ ಮೀಡಿಯಾ ಖಾತೆಗಳು ಹಾಗೂ ಜಿ-ಮೇಲ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ರಿತೇಶ್ ಮತ್ತು ರಾಖಿ ಸಾವಂತ್ ಬೇರೆಬೇರೆ ಆಗಿದ್ದಾರೆ. ಹೊಸ ಬಾಯ್ ಫ್ರೆಂಡ್ ಆದಿಲ್ ಖಾನ್ ಜೊತೆ ರಾಖಿ ಸುತ್ತಾಡುತ್ತಿದ್ದಾರೆ. ಆದಿಲ್ ಮತ್ತು ರಾಖಿ ಜೊತೆಯಾಗಿ ಬಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ನನ್ನ ಜೀವನವನ್ನು ಹಾಳು ಮಾಡಲು ಮಾಜಿ ಗಂಡ ರಿತೇಶ್ ಈ ರೀತಿ ಮಾಡಿದ್ದಾನೆ. ನಾನು ಆದಿ ಜೊತೆ ಇರುವುದನ್ನು ಅವನು ಸಹಿಸುತ್ತಿಲ್ಲ’ ಎಂದು ರಾಖಿ ಆರೋಪಿಸಿದ್ದಾರೆ.
‘ಮೊದಲಿಗೆ ನನ್ನ ಸೋಶಿಯಲ್ ಮೀಡಿಯಾ ಖಾತೆಗಳನ್ನು ರಿತೇಶ್ ಹ್ಯಾಂಡಲ್ ಮಾಡುತ್ತಿದ್ದ. ಈಗ ಅವುಗಳನ್ನು ಹ್ಯಾಕ್ ಮಾಡಿದ್ದಾನೆ. ಖಾಸಗಿ ಚಾನೆಲ್ ವಿರುದ್ಧ ಕೆಟ್ಟದಾಗಿ ಪೋಸ್ಟ್ ಮಾಡುತ್ತಿದ್ದಾನೆ. ಇದರಿಂದ ನನ್ನ ಜೀವನಕ್ಕೆ ತುಂಬ ತೊಂದರೆ ಆಗುತ್ತಿದೆ. ಆತ ನನ್ನ ಕರೆಯನ್ನೂ ಸ್ವೀಕರಿಸುತ್ತಿಲ್ಲ’ ಎಂದು ಪೊಲೀಸ್ ಠಾಣೆಯ ಎದುರು ರಾಖಿ ಸಾವಂತ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:00 am, Sun, 12 June 22