ಬಹುತೇಕ ಸ್ಟಾರ್ ಸಿನಿಮಾ ನಟ, ನಟಿಯರು ತಾವು ಪಡೆಯುವ ಭಾರಿ ಮೊತ್ತದ ಸಂಭಾವನೆಯನ್ನು ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಾರೆ. ಕೆಲವು ನಟ-ನಟಿಯರಂತೂ ತಮ್ಮದೇ ಆದ ಬ್ರ್ಯಾಂಡ್ಗಳನ್ನು ತೆರೆದಿದ್ದಾರೆ. ಹಲವು ಚಿತ್ರ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಕೆಲವರು ಚಿತ್ರಮಂದಿರಗಳನ್ನೇ ಕಟ್ಟಿಸಿದ್ದಾರೆ. ಕೆಲವರು ಹೋಟೆಲ್ ಪ್ರಾರಂಭಿಸಿದ್ದಾರೆ, ಕೆಲವರು ರಿಯಲ್ ಎಸ್ಟೇಟ್ ಇನ್ನು ಕೆಲವರು ಕ್ರೀಡೆಯ ಮೇಲೆ ಹೂಡಿಕೆ ಮಾಡಿದ್ದಾರೆ. ಇದೀಗ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಸಹ ಹೊಸ ಉದ್ಯಮವೊಂದರ ಮೇಲೆ ಹೂಡಿಕೆ ಮಾಡಿದ್ದಾರೆ.
ಸ್ಟಾರ್ ನಟ-ನಟಿಯರು ಕ್ರೀಡೆಗಳ ಮೇಲೆ ಹೂಡಿಕೆ ಮಾಡುವ ಪರಿಪಾಟ ಐಪಿಎಲ್ ಪ್ರಾರಂಭವಾದಾಗಿನಿಂದಲೂ ಹೆಚ್ಚಾಗಿದೆ. ಶಾರುಖ್ ಖಾನ್, ಜೂಹಿ ಚಾವ್ಲಾ ಕೆಕೆಆರ್ ತಂಡದ ಮೇಲೆ ಹೂಡಿಕೆ ಮಾಡಿದ್ದರೆ, ಪ್ರೀತಿ ಜಿಂಟಾ ಪಂಜಾಬ್ ತಂಡದ ಮೇಲೆ, ಶಿಲ್ಪಾ ಶೆಟ್ಟಿ ರಾಜಸ್ಥಾನ ತಂಡದ ಮೇಲೆ. ಹೀಗೆ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಅವರುಗಳು ಕಬಡ್ಡಿ ತಂಡದ ಮೇಲೆ ಹೂಡಿಕೆ ಮಾಡಿದ್ದಾರೆ. ಇದೀಗ ರಕುಲ್ ಪ್ರೀತ್ ಸಿಂಗ್ ಟೆನ್ನಿಸ್ ತಂಡವೊಂದನ್ನು ಖರೀದಿ ಮಾಡಿದ್ದಾರೆ.
ಐಪಿಎಲ್, ಫುಟ್ಬಾಲ್ ಲೀಗ್, ಕಬಡ್ಡಿ ಲೀಗ್ ಮಾದರಿಯಲ್ಲಿಯೇ ಟೆನ್ನಿಸ್ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಹೈದರಾಬಾದ್ ತಂಡದ ಮೇಲೆ ರಕುಲ್ ಪ್ರೀತ್ ಸಿಂಗ್ ಹೂಡಿಕೆ ಮಾಡಿದ್ದಾರೆ. ಹೈದರಾಬಾದ್ ಸ್ಟ್ರೈಕರ್ಸ್ ತಂಡದ ಸಹ ಒಡತಿ ರಕುಲ್ ಪ್ರೀತ್ ಸಿಂಗ್ ಆಗಿದ್ದು, ನವೀನ್ ದಾಲ್ಮಿಯಾ, ರಾಜ್ದೀಪ್ ದಾಲ್ಮಿಯಾ, ನಿಕುಂಜ್ ಶಾ ಅವರುಗಳು ಈ ತಂಡದ ಇತರೆ ಓನರ್ಗಳಾಗಿದ್ದಾರೆ. ಹೈದರಾಬಾದ್ ಸ್ಟ್ರೈಕರ್ಸ್ ತಂಡ ಈಗಾಗಲೇ ಎರಡು ಬಾರಿ ಚಾಂಪಿಯನ್ ಎನಿಸಿಕೊಂಡಿದ್ದು, ಈಗ ಮಾಲಿಕತ್ವ ಬದಲಾದ ಬಳಿಕ ತಂಡ ಹೇಗೆ ಫರ್ಮಾರ್ಮ್ ಮಾಡಲಿದೆ ಎಂದು ನೋಡಬೇಕಿದೆ.
ಇದನ್ನೂ ಓದಿ:Rakul Preet Singh: ಮಾಲ್ಡೀವ್ಸ್ನಲ್ಲಿ ಬಿಕಿನಿ ಹಾಕಿ ಮಿಂಚಿದ ನಟಿ ರಕುಲ್ ಪ್ರೀತ್ ಸಿಂಗ್; ಇಲ್ಲಿವೆ ಫೋಟೋಸ್
”ಟಿಪಿಎಲ್, ದೇಶದ ಪ್ರತಿಭಾವಂತ ಟೆನಿಸ್ ಆಟಗಾರರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಕ್ರೀಡೆಯಲ್ಲಿ ದೊಡ್ಡ ಹೆಸರು ಮಾಡಲು ಒಳ್ಳೆಯ ವೇದಿಕೆಯಾಗಿದೆ. ಭಾರತೀಯ ಟೆನಿಸ್‌ಗೆ ನೀಡಿದ ಕೊಡುಗೆಗಾಗಿ ಹೈದರಾಬಾದ್ ಯಾವಾಗಲೂ ಹೆಸರುವಾಸಿಯಾಗಿದೆ ಮತ್ತು ಹೈದರಾಬಾದ್ ಸ್ಟ್ರೈಕರ್‌ಗಳೊಂದಿಗೆ ನಾವು ಆ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಲು ಬಯಸುತ್ತೇವೆ” ಎಂದಿದ್ದಾರೆ ರಕುಲ್ ಪ್ರೀತ್ ಸಿಂಗ್.
ಸಿನಿಮಾ ವಿಷಯಕ್ಕೆ ಬರುವುದಾದರೆ ರಕುಲ್ ಪ್ರೀತ್ ಸಿಂಗ್, ‘ಮೇರಿ ಪತ್ನಿ ಕಾ ರೀಮೇಕ್’, ‘ಐ ಲವ್ ಯೂ’ ಹೆಸರಿನ ಹಿಂದಿ ಸಿನಿಮಾಗಳು, ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’, ‘ಅಯಲಾನ್’ ಹೆಸರಿನ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2009 ರಲ್ಲಿ ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ನೀಡಿದ ರಕುಲ್ ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ