ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮಗೆ ಸಂಬಂಧ ಇಲ್ಲದ ವಿಚಾರಗಳಿಗೂ ತಲೆ ಹಾಕುತ್ತಾರೆ. ಈಗ ಅವರು ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ವಿಚಾರದಲ್ಲಿ ಬಗ್ಗೆ ತಮ್ಮ ಮೂಗು ತೂರಿಸಿದ್ದಾರೆ. ಸಿನಿಮಾದಲ್ಲಿ ಅಂಡರ್ವರ್ಲ್ಡ್ ಕಥೆಯನ್ನು ತೋರಿಸಿದ್ದ ರಾಮ್ ಗೋಪಾಲ್ ವರ್ಮಾ ಅವರು ಈಗ ರಿಯಲ್ ಅಂಡರ್ವರ್ಲ್ಡ್ ಮಂದಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇದರಿಂದ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕೋಪಗೊಳ್ಳುವ ಸಾಧ್ಯತೆ ಕೂಡ. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಆರ್ಜಿವಿ ಬಾಯಿಗೆ ಬಂದಂತೆ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಬಾಬಾ ಸಿದ್ಧಿಕಿ ಅವರ ಹತ್ಯೆ ನಡೆಯಿತು. ಸಲ್ಮಾನ್ ಖಾನ್ ಜೊತೆ ಬಾಬಾ ಸಿದ್ಧಿಕಿ ಅವರಿಗೆ ಆಪ್ತ ಒಡನಾಟ ಇತ್ತು. ಆ ಕಾರಣದಿಂದಲೇ ಬಾಬಾ ಸಿದ್ಧಿಕಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ಗೆ ಯಾರೆಲ್ಲ ಸಹಾಯ ಮಾಡುತ್ತಾರೋ ಅವರನ್ನು ಕೂಡ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
‘ಬಿಷ್ಣೋಯ್ಗೆ ಸಲ್ಮಾನ್ ಖಾನ್ ಅವರು ತಿರುಗೇಟು ನೀಡಬೇಕು. ಇಲ್ಲದಿದ್ದರೆ ಇದು ಸ್ಟಾರ್ ನಟನ ಹೇಡಿತನದ ರೀತಿ ಕಾಣುತ್ತದೆ. ಬಿಷ್ಣೋಯ್ಗೆ ಹೋಲಿಸಿದರೆ ತಾವು ದೊಡ್ಡ ಸೂಪರ್ ಹೀರೋ ಎಂಬುದನ್ನು ಸಲ್ಮಾನ್ ಖಾನ್ ಅವರು ತಮ್ಮ ಅಭಿಮಾನಿಗಳಿಗಾಗಿ ಎದ್ದು ನಿಲ್ಲಬೇಕು’ ಎಂದು ರಾಮ್ ಗೋಪಾಲ್ ವರ್ಮಾ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ ಬಾಬಾ ಸಿದ್ಧಿಕಿ ಹಂತಕರು
ಅಷ್ಟೇ ಅಲ್ಲದೇ ಲಾರೆನ್ಸ್ ಬಿಷ್ಣೋಯ್ನ ವ್ಯಕ್ತಿತ್ವವನ್ನು ವಿಶ್ಲೇಷಣೆ ಮಾಡುವಂತಹ ಪೋಸ್ಟ್ಗಳನ್ನು ಕೂಡ ರಾಮ್ ಗೋಪಾಲ್ ವರ್ಮಾ ಮಾಡಿದ್ದಾರೆ. ಆತನ ರೂಪ ಚೆನ್ನಾಗಿದೆ ಎಂದು ಹೊಗಳಿದ್ದಾರೆ. ಅಲ್ಲದೇ ಆತನನ್ನು ಹಿಂದೂ ಡಾನ್ ಎಂದು ಕೂಡ ಕರೆದಿದ್ದಾರೆ. ರಣಬೀರ್ ಕಪೂರ್ ನಟನೆಯ ಅನಿಮಲ್ಗಿಂತಲೂ ಕ್ರೂರಿ ಆತ ಎಂದು ಆರ್ಜಿವಿ ಹೇಳಿದ್ದಾರೆ. ಅವರ ಪೋಸ್ಟ್ಗೆ ಅನೇಕರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.