
ದೀಪಾವಳಿ ಹಬ್ಬದ ಪ್ರಯುಕ್ತ ಇಂದು (ಅಕ್ಟೋಬರ್ 25) ‘ರಾಮ್ ಸೇತು’ (Ram Setu) ಸಿನಿಮಾ ರಿಲೀಸ್ ಆಗಿದೆ. ರಾಮಾಯಣದ ಕಥೆಯಲ್ಲಿ ಬರುವ ರಾಮ ಸೇತು ವಿಚಾರವನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ನಟ ಅಕ್ಷಯ್ ಕುಮಾರ್ (Akshay Kumar) ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಈ ಸಿನಿಮಾದಿಂದ ತುರ್ತಾಗಿ ಗೆಲ್ಲುವ ಅನಿವಾರ್ಯತೆ ಇದೆ. ‘ರಾಮ್ ಸೇತು’ ಚಿತ್ರಕ್ಕೆ ಹೇಳಿಕೊಳ್ಳುವಷ್ಟು ಒಳ್ಳೆಯ ಮಟ್ಟದಲ್ಲಿ ಅಡ್ವಾನ್ಸ್ ಬುಕಿಂಗ್ ಆಗಿರಲಿಲ್ಲ. ಮೊದಲ ದಿನ ಮೊದಲ ಶೋ ನೋಡಿ ಬಂದಿರುವ ಪ್ರೇಕ್ಷಕರು ಟ್ವಿಟರ್ (Ram Setu Twitter Review) ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆ ಇದು ಬೆಸ್ಟ್ ಉಡುಗೊರೆ ಎಂದು ಕೆಲವರು ಹೊಗಳುತ್ತಿದ್ದಾರೆ.
ಯಾವುದೇ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ತುಂಬ ಮುಖ್ಯವಾಗುತ್ತದೆ. ಫಸ್ಟ್ ಡೇ ಫಸ್ಟ್ ಶೋ ನೋಡಿ ಅಭಿಮಾನಿಗಳು ‘ಸಿನಿಮಾ ಚೆನ್ನಾಗಿದೆ’ ಎಂದು ಹೇಳಿದರೆ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ‘ರಾಮ್ ಸೇತು’ ಚಿತ್ರಕ್ಕೆ ಮೊದಲ ದಿನವೇ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ.
ಅಭಿಷೇಕ್ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಕುಮಾರ್ ಜೊತೆಗೆ ಜಾಕ್ವೆಲಿನ್ ಫರ್ನಾಂಡಿಸ್, ನುಸ್ರತ್ ಬರುಚಾ ಮುಂತಾದವರು ನಟಿಸಿದ್ದಾರೆ. ‘ಈ ಕಥೆ ಅಡ್ವೆಂಚರಸ್ ಆಗಿದೆ. ಅಕ್ಷಯ್ ಕುಮಾರ್ ಅವರ ಎನರ್ಜಿ ಸೂಪರ್’ ಎಂದು ಅಭಿಮಾನಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.
‘ಅಕ್ಷಯ್ ಕುಮಾರ್ ಅವರ ಎಂಟ್ರಿ ಸೂಪರ್ ಆಗಿದೆ. ಅವರು ಮತ್ತೆ ಮೊದಲಿನ ಟ್ರ್ಯಾಕ್ಗೆ ಮರಳಿದ್ದಾರೆ. ಈ ಸಿನಿಮಾದಲ್ಲಿ ಗ್ರಾಫಿಕ್ಸ್ ಗುಣಮಟ್ಟ ಕೂಡ ಚೆನ್ನಾಗಿದೆ’ ಎಂದು ಪ್ರೇಕ್ಷಕರೊಬ್ಬರು ಹೊಗಳಿದ್ದಾರೆ. ಅನೇಕರು ಈ ಚಿತ್ರಕ್ಕೆ 4 ಸ್ಟಾರ್ ನೀಡಿದ್ದಾರೆ.
ಈವರೆಗೂ ಹಲವು ಬಗೆಯ ಪಾತ್ರಗಳನ್ನು ಮಾಡಿ ಅಕ್ಷಯ್ ಕುಮಾರ್ ಸೈ ಎನಿಸಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಇತ್ತೀಚೆಗೆ ಅವರ ಸಿನಿಮಾಗಳು ಸತತವಾಗಿ ಸೋತಿದ್ದು ಬೇಸರದ ಸಂಗತಿ. ‘ಬಚ್ಚನ್ ಪಾಂಡೆ’, ‘ರಕ್ಷಾ ಬಂಧನ್’ ಹಾಗೂ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಿರಲಿಲ್ಲ. ಈಗ ಆ ಬೇಸರವನ್ನು ಮರೆಸುವ ರೀತಿಯಲ್ಲಿ ‘ರಾಮ್ ಸೇತು’ ಸಿನಿಮಾ ಎಂಟ್ರಿ ನೀಡಿದೆ. ಅಂತಿಮವಾಗಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.
‘ರಾಮ್ ಸೇತು’ ಚಿತ್ರಕ್ಕೆ ಪೈಪೋಟಿ ನೀಡಲು ಅಜಯ್ ದೇವಗನ್ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾ ರಿಲೀಸ್ ಆಗಿದೆ. ಇದರಿಂದ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಆಗಿದೆ. ದೀಪಾವಳಿ ಹಬ್ಬದ ರಜಾ ದಿನಗಳನ್ನು ಎನ್ಕ್ಯಾಶ್ ಮಾಡಿಕೊಳ್ಳಲು ಈ ಸಿನಿಮಾಗಳು ಹಣಾಹಣಿ ನಡೆಸುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:10 pm, Tue, 25 October 22