
ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ, ಚಿತ್ರದಲ್ಲಿ ಸೀತೆಯ ಪಾತ್ರವನ್ನು ಚಿತ್ರಿಸಿರುವ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಆ್ಯಕ್ಷನ್ ದೃಶ್ಯಗಳಲ್ಲಿ ಯೋಧಳಂತೆ ಕಾಣಿಸಿಕೊಂಡಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕೆ ನಿರ್ದೇಶಕ ನಿತೇಶ್ ತಿವಾರಿ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಿತೇಶ್ ತಿವಾರಿ ಅವರು, ಸೀತೆಯನ್ನು ಯೋಧೆಯಾಗಿ ತೋರಿಸಿರುವುದು ತಮ್ಮ ಕಲ್ಪನೆಯಲ್ಲ, ಬದಲಾಗಿ ಭಾರತದ ಕೆಲವು ಅಪರೂಪದ ರಾಮಾಯಣ ಗ್ರಂಥಗಳಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಸಂಸ್ಕೃತದ ‘ಅದ್ಭುತ ರಾಮಾಯಣ’ ಮತ್ತು 15ನೇ ಶತಮಾನದ ಒಡಿಯಾ ಭಾಷೆಯ ‘ಬಿಲಂಕಾ ರಾಮಾಯಣ’ ಗ್ರಂಥಗಳನ್ನು ಉಲ್ಲೇಖಿಸಿದ ಅವರು, ‘ಜನಸಾಮಾನ್ಯರಿಗೆ ತಿಳಿದಿರುವ ರಾಮಾಯಣಕ್ಕಿಂತ ಭಿನ್ನವಾಗಿ ಈ ಗ್ರಂಥಗಳಲ್ಲಿ ಸೀತೆಯನ್ನು ಚಿತ್ರಿಸಲಾಗಿದೆ. ಇವುಗಳಲ್ಲಿ ಸೀತೆಯು ಕೇವಲ ಕಷ್ಟಗಳನ್ನು ಸಹಿಸಿಕೊಳ್ಳುವ ಪಾತ್ರವಲ್ಲ, ಬದಲಾಗಿ ಸಕ್ರಿಯ ಯೋಧೆ ಮತ್ತು ಆದಿಶಕ್ತಿಯ ರೂಪವಾಗಿ ಕಾಣಿಸಿಕೊಂಡಿದ್ದಾರೆ’ ಎಂದಿದ್ದಾರೆ.
ಈ ಗ್ರಂಥಗಳ ಕಥೆಯನ್ನು ವಿವರಿಸಿದ ತಿವಾರಿ, ‘ಶ್ರೀರಾಮನಿಗೆ ಯುದ್ಧ ಮಾಡಲು ಸಾಧ್ಯವಾಗದ ಸಂದರ್ಭ ಎದುರಾದಾಗ, ಸೀತೆಯು ಉಗ್ರ ಮಹಾಕಾಳಿಯ ರೂಪ ತಾಳಿ ಸಾವಿರ ತಲೆಗಳ ರಾಕ್ಷಸ ರಾಜನಾದ ಸಹಸ್ರ ರಾವಣನನ್ನು ಸಂಹರಿಸುತ್ತಾಳೆ ಎಂಬ ಉಲ್ಲೇಖ ಈ ರಾಮಾಯಣಗಳಲ್ಲಿದೆ’ ಎಂದು ವಿವರಿಸಿದ್ದಾರೆ. ಅಲ್ಲದೆ, ಸೀತೆಯನ್ನು ಯೋಧೆಯಾಗಿ ತೋರಿಸಿರುವುದನ್ನು ಕೇವಲ ಆಧುನಿಕ ಸ್ತ್ರೀವಾದದ ದೃಷ್ಟಿಕೋನದಿಂದ ನೋಡಬಾರದು. ಭಾರತದ ವಿವಿಧ ರಾಮಾಯಣ ಕಥನಗಳಲ್ಲಿ ಈ ರೀತಿಯ ಚಿತ್ರಣ ಮೊದಲಿನಿಂದಲೂ ಅಸ್ತಿತ್ವದಲ್ಲಿದೆ. ಹಾಗಾಗಿ ಇದು ಹೊಸತೂ ಅಲ್ಲ ಅಥವಾ ಅಪ್ರಸ್ತುತವೂ ಅಲ್ಲ ಎಂದು ನಿತೇಶ್ ತಿವಾರಿ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ನಿತೇಶ್ ತಿವಾರಿ ಅವರಿಗೂ ಮುನ್ನ, ಚಿತ್ರದಲ್ಲಿ ಕೈಕೇಯಿ ಪಾತ್ರ ನಿರ್ವಹಿಸಿರುವ ನಟಿ ಲಾರಾ ದತ್ತಾ ಕೂಡ ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದರು. ಎನ್ಡಿಟಿವಿ ಜೊತೆ ಮಾತನಾಡಿದ್ದ ಅವರು, ‘ಸಿನಿಮೀಯ ಅನುಭವವನ್ನು ಆನಂದಿಸಿ. ಆ ಕಾಲದ ರಾಜಮನೆತನಗಳಲ್ಲಿ ಹುಟ್ಟಿದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಕಲೆಗಳ ಜೊತೆಗೆ ಶಸ್ತ್ರಾಸ್ತ್ರ ತರಬೇತಿಯನ್ನೂ ನೀಡಲಾಗುತ್ತಿತ್ತು’ ಎಂದಿದ್ದರು.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಮಾಡಿದ್ದರಿಂದ ಹಣ ವ್ಯರ್ಥ ಎಂದ ನಟ ಮುಖೇಶ್ ಖನ್ನಾ
‘ಹಾಗಾಗಿ ಸೀತೆಗೆ ಯುದ್ಧಕಲೆಯ ತರಬೇತಿ ಇತ್ತು ಎಂದು ಭಾವಿಸುವುದು ಅಸಂಭವವೇನಲ್ಲ. ಅಂತಹ ಕಠಿಣ ಪರಿಸ್ಥಿತಿಗೆ ಸಿಲುಕಿದಾಗ ಯಾವ ಮಹಿಳೆಯೂ ಅಸಹಾಯಕಳಾಗಿ ಕೂರುವುದಿಲ್ಲ’ ಎಂದು ಹೇಳುವ ಮೂಲಕ ಲಾರಾ ದತ್ತಾ ಕೂಡ ಸಾಯಿ ಪಲ್ಲವಿ ಪಾತ್ರಕ್ಕೆ ಬೆಂಬಲ ಸೂಚಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.