
ಅಯಾನ್ ಮುಖರ್ಜಿ ನಿರ್ದೇಶನ ಮಾಡುತ್ತಿರುವ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾ ಹಲವು ಕಾರಣದಿಂದ ಸುದ್ದಿ ಆಗುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ರಿಲೀಸ್ ಆಯಿತು. ಅದನ್ನು ಕಂಡು ನೆಟ್ಟಿಗರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರ ಅಪ್ಪಟ ಅಭಿಮಾನಿಗಳಿಗೆ ‘ಬ್ರಹ್ಮಾಸ್ತ್ರ’ ಟ್ರೇಲರ್ (Brahmastra Trailer) ಇಷ್ಟ ಆಗಿದೆ. ಆದರೆ ಇನ್ನೊಂದು ವರ್ಗದ ನೆಟ್ಟಿಗರು ಇದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಶಿವ ಎಂಬ ಪಾತ್ರ ಮಾಡಿದ್ದಾರೆ. ಕೆಲವು ಸೀನ್ಗಳಲ್ಲಿ ತ್ರಿಶೂಲ ಹಿಡಿದು ಕೂಡ ಪೋಸ್ ನೀಡಿದ್ದಾರೆ. ಆದರೆ ಇದರ ನಡುವೆ ಒಂದು ಎಡವಟ್ಟು ಕೂಡ ಆಗಿದೆ. ರಣಬೀರ್ ಕಪೂರ್ (Ranbir Kapoor) ಅವರು ಶೂ ಧರಿಸಿ ದೇವಸ್ಥಾನದ ಒಳಗೆ ಪ್ರವೇಶಿಸುತ್ತಿರುವ ದೃಶ್ಯ ಕೂಡ ಟ್ರೇಲರ್ನಲ್ಲಿ ಕಾಣಿಸಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಅನೇಕರು ಆರೋಪಿಸಿದ್ದಾರೆ.
‘ಬ್ರಹ್ಮಾಸ್ತ್ರ’ ಸಿನಿಮಾದ ಕಥೆ ಏನು ಎಂಬುದರ ಸುಳಿವನ್ನು ಈ ಟ್ರೇಲರ್ನಲ್ಲಿ ಬಿಟ್ಟುಕೊಡಲಾಗಿದೆ. ಸೂಪರ್ ಹೀರೋ ರೀತಿ ಇರುವ ಶಿವ ಎಂಬ ವ್ಯಕ್ತಿಯಾಗಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರು ಶೂ ಧರಿಸಿ ದೇಗುಲ ಪ್ರವೇಶಿಸಿದ್ದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಚಿತ್ರತಂಡದಿಂದ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಆ ದೃಶ್ಯವನ್ನು ಬದಲಾಯಿಸಬೇಕು ಎಂಬ ಒತ್ತಾಯ ಕೂಡ ಕೇಳಿಬಂದಿದೆ.
ರಣಬೀರ್ ಕಪೂರ್, ಆಲಿಯಾ ಭಟ್ ಮಾತ್ರವಲ್ಲದೇ ಅಕ್ಕಿನೇನಿ ನಾಗಾರ್ಜುನ, ಅಮಿತಾಭ್ ಬಚ್ಚನ್, ಮೌನಿ ರಾಯ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಚಿತ್ರದ ಟ್ರೇಲರ್ನಲ್ಲಿ ಗ್ರಾಫಿಕ್ಸ್ ದೃಶ್ಯಗಳು ಹೈಲೈಟ್ ಆಗಿವೆ. ಆದರೆ ಗ್ರಾಫಿಕ್ಸ್ ಗುಣಮಟ್ಟ ಕಳಪೆ ಆಗಿದೆ ಎಂಬ ಕಾರಣದಿಂದಲೂ ಚಿತ್ರತಂಡವನ್ನು ಟ್ರೋಲ್ ಮಾಡಲಾಗುತ್ತಿದೆ.
ಸೆಪ್ಟೆಂಬರ್ 9ರಂದು ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್ ಆಗಲಿದೆ. ಮೂರು ಪಾರ್ಟ್ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಮೊದಲ ಭಾಗಕ್ಕೆ ‘ಬ್ರಹ್ಮಾಸ್ತ್ರ ಪಾರ್ಟ್ 1: ಶಿವ’ ಎಂದು ಶೀರ್ಷಿಕೆ ಇಡಲಾಗಿದೆ. ನಟಿ ಮೌನಿ ರಾಯ್ ಅವರು ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿದ್ದಾರೆ. ಅವರ ಲುಕ್ ಬಗ್ಗೆಯೂ ಕೆಲವರು ಲೇವಡಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಸಖತ್ ಚರ್ಚೆ ಹುಟ್ಟುಹಾಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.